ನ್ಯೂಸ್ ನಾಟೌಟ್: ತಂದೆ ತನ್ನ ಮಗಳ ಹುಟ್ಟುಹಬ್ಬಕ್ಕೆ ಕೊಳಕು ನೀರಿನ ಬಾಟಲಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ವಿಷಯವನ್ನು ಮಗಳು ಫೋಟೋ ಸಮೇತ ಟ್ವೀಟ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಈ ವರ್ಷದ ಹುಟ್ಟುಹಬ್ಬಕ್ಕೆ ನನ್ನ ತಂದೆ ಕೊಳಕು ನೀರಿನಿಂದ ತುಂಬಿದ ಬಾಟಲಿಯನ್ನು ಉಡುಗೊರೆಯಾಗಿ(Gift) ನೀಡಿದ್ದಾರೆ. ನನ್ನ ತಂದೆ ಪ್ರತೀ ವರ್ಷ ಕೊಡುವ ಉಡುಗೊರೆಗಳು ನಿಜಕ್ಕೂ ಅಸಾಮಾನ್ಯ’ ಎಂದು ಹೇಳುತ್ತಾ, ಇಂಥ ಉಡುಗೊರೆಗಳ ಹಿಂದಿ ಕಾರಣವೇನು ಎನ್ನುವುದನ್ನು ಆಕೆ ತಿಳಿಸಿದ್ದಾರೆ.
ಮಗಳು ಪೆಟ್ರೀಷಿಯಾ ಮೌ ಎಂಬಾಕೆ ಹೇಳಿದಂತೆ, ‘ನಾನು ತಮಾಷೆ ಮಾಡುತ್ತಿಲ್ಲ. ನಿಜವಾಗಿಯೂ ಕೊಳಕು ನೀರಿನ ಬಾಟಲಿಯನ್ನು ಉಡುಗೊರೆಯನ್ನು ಪಡೆದಿದ್ದೇನೆ. ಇಂಥ ಅಪರೂಪದ ಉಡುಗೊರೆಗಳನ್ನು ಪಡೆದಿರುವುದು ಮೊದಲೇನಲ್ಲ. ಈ ಹಿಂದೆ ಫರ್ಸ್ಟ್ ಏಡ್ ಕಿಟ್, ಪೆಪ್ಪರ್ ಸ್ಪ್ರೇ, ಎನ್ಸೈಕ್ಲೋಪೀಡಿಯಾ, ಕೀಚೈನ್ ಕೊಟ್ಟಿದ್ದರು. ಅವರು ಬರೆದ ಪುಸ್ತಕವನ್ನು ನನಗೆ ಅರ್ಪಿಸಿದ್ದರು. ಅವರು ಕೊಡುವ ಉಡುಗೊರೆಗಳನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ನಿಜಕ್ಕೂ ಅವು ಜೀವನದ ಅತ್ಯಮೂಲ್ಯ ಉಡುಗೊರೆಗಳು’ ಎಂದಿದ್ದಾರೆ.
‘ಬಾಟಲಿಯನ್ನು ಅಲುಗಾಡಿಸಿದಾಗ ಆ ನೀರು ಹೇಗಿರುತ್ತದೆ? ಎಲ್ಲವೂ ಕೊಳಕು ಎಂಬಂತಾಗುತ್ತದೆ ತಾನೆ? ನಾವು ಜೀವನದಲ್ಲಿ ಗೊಂದಲಕ್ಕೆ ಬಿದ್ದಾಗಲೂ ಹೀಗೆಯೇ ಆಗುತ್ತದೆ. ಆದರೆ ಆ ಬಾಟಲಿಯನ್ನು ಸ್ವಲ್ಪ ಹೊತ್ತು ಸುಮ್ಮನೇ ಇಟ್ಟರೆ ಕಲ್ಮಷವೆಲ್ಲ ತಳ ಸೇರಿ ಮೇಲೆ ತಿಳಿನೀರು ತೇಲುತ್ತದೆ. ಹಾಗೆಯೇ ಮನಸ್ಸೂ ಕೂಡ. ನಮ್ಮ ಜೀವನದೃಷ್ಟಿಯನ್ನು ಹೀಗೆ ಕಾಪಾಡಿಕೊಳ್ಳಬೇಕು’ ಎಂದು ತಾತ್ವಿಕವಾಗಿ ಮಾತನಾಡಿದ್ದಾಳೆ ಆಕೆ.
‘ವಾರಾಂತ್ಯಕ್ಕೆ ನಾನು ಈ ಬಾಟಲಿಯನ್ನು ತೆಗೆದುಕೊಂಡು ಹೋಗಿ ವಾಪಾಸು ಸಮುದ್ರಕ್ಕೆ ಸುರಿದೆ. ನೀನು ಸಮುದ್ರದೊಳಗಿನ ಒಂದು ಹನಿ ಅಲ್ಲ. ಹನಿಯೊಳಗಿರುವ ಸಮುದ್ರ ನೀನು ಎಂದು ಅಪ್ಪನಿಗೆ ಹೇಳಿದೆ. ನಾನು ಅವನ ಮಗು ತಾನೇ?’ ಎಂದಿದ್ದಾಳೆ ಆಕೆ ಬರೆದುಕೊಂಡಿದ್ದಾಳೆ. ಅಕ್ಟೋಬರ್ 2 ರಂದು ಪೋಸ್ಟ್ ಅನ್ನು ಆಕೆ X ನಲ್ಲಿ ಹಂಚಿಕೊಂಡಿದ್ದಾಳೆ.
ಈತನಕ ಸುಮಾರು 2.9 ಮಿಲಿಯನ್ ಜನರು ನೋಡಿದ್ದಾರೆ. 20,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇದು ತುಂಬಾ ಮುದ್ದಾದ ಉಡುಗೊರೆ. ನಿಜಕ್ಕೂ ಇದು ಜೀವನಪಾಠ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅನೇಕರು ಹೇಳಿದ್ದಾರೆ. ಇದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ