ನ್ಯೂಸ್ ನಾಟೌಟ್ : ಅನುಮತಿ ಪಡೆದು ಸುಳ್ಯ ನಗರದಲ್ಲಿ ಹಾಕಿದ್ದ ಸೌಜನ್ಯ ನ್ಯಾಯದ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸುಳ್ಯದಲ್ಲಿ ಗಾಂಧಿಸ್ಮೃತಿ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು. ಅ.೩ರಂದು ಮಂಗಳವಾರ ಬೆಳ್ಳಂ ಬೆಳಗ್ಗೆ ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ಸೌಜನ್ಯ ಪರ ಅನುಮತಿ ಪಡೆದು ರಸ್ತೆಗಳಲ್ಲಿ ಹಾಕಿದ್ದ ಬ್ಯಾನರ್ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡಿದ್ದರು. ಇದೀಗ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ವಿವಿಧ ಸಂಘಟನೆಗಳು ಬ್ಯಾನರ್ ಅಳವಡಿಸಿದ್ದರು. ಇದರಲ್ಲಿ ಕೆಲವು ಬ್ಯಾನರ್ ಗಳು ಪರವಾನಗಿ ಪಡೆಯದೆ ಹಾಕಲಾಗಿತ್ತು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ನ.ಪಂ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬ್ಯಾನರ್ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ಈ ನಡುವೆ ಕೆಲವು ಪರವಾನಗಿ ಪಡೆದುಕೊಂಡ ಬ್ಯಾನರ್ ಗಳನ್ನೂ ತೆರವು ಮಾಡಿದ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ನಗರ ಪಂಚಾಯತ್ ಒಪ್ಪಿಗೆ ಪಡೆದುಕೊಂಡೇ ಈ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು.ಈ ಕುರಿತು ನಮ್ಮ ಬಳಿ ದಾಖಲೆಗಳಿವೆ. ಒಂದು ವರ್ಗವನ್ನು ಓಲೈಸಲು ಮಾಡಿದ ಕಾರ್ಯಾಚರಣೆಯಾಗಿದೆ ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿವೆ.