ನ್ಯೂಸ್ ನಾಟೌಟ್ : ನಗರದ (Shivamogga) ರಾಗಿಗುಡ್ಡದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಸತ್ಯಶೋಧನಾ ಸಮಿತಿ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ.
ಮೊದಲಿಗೆ ಬಿಜೆಪಿ ಮುಖಂಡರ ತಂಡ ಮೆಗ್ಗಾನ್ ಆಸ್ಪತ್ರೆಗೆ ಇಂದು(ಅ.೫) ಭೇಟಿ ನೀಡಿದೆ. ಈ ವೇಳೆ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಏಳು ಜನ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದೆ. ಅಲ್ಲದೇ ಗಾಯಾಳುಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದೆ.
ಈ ವೇಳೆ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ ಅವರು ಗಾಯಾಳುಗಳ ಆರೋಗ್ಯ ಸುಧಾರಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಗಲಭೆ ನಡೆದ ಸ್ಥಳಕ್ಕೆ ತಂಡ ಭೇಟಿ ನೀಡಿದ್ದು, ಸಂತ್ರಸ್ಥರ ಮನೆಗಳಿಲ್ಲಿ ಪರಿಸ್ಥಿತಿ ಅವಲೋಕಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ನೇತೃತ್ವದ ತಂಡ ಮಾಹಿತಿ ಕಲೆಹಾಕಲು ನಗರಕ್ಕೆ ತೆರಳಿದೆ. ತಂಡದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಡಾ.ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಚನ್ನಬಸಪ್ಪ ಇದ್ದಾರೆ. ಪ್ರಕರಣ ಹಿನ್ನೆಲೆ ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿ ತಂಡ ಈ ನಿರ್ಧಾರ ಕೈಗೊಂಡಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ʼʼ ಶಾಂತ ಸ್ಥಿತಿಗೆ ಬಂದಿರುವ ಶಿವಮೊಗ್ಗಕ್ಕೆ ಬಿಜೆಪಿ ನಾಯಕರು ಹೋಗಿರುವುದು ಸತ್ಯ ಶೋಧನೆಗಲ್ಲ ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಲುʼʼ ಎಂದು ಆರೋಪಿಸಿದೆ.
ಅಲ್ಲದೇ, ʼʼಸತ್ಯ ಶೋಧನೆ ಮಾಡುವುದಕ್ಕೆ ಪೊಲೀಸರಿದ್ದಾರೆ, ಕಾನೂನಿದೆ, ಬಿಜೆಪಿಯವರ ಅಗತ್ಯವಿಲ್ಲ, ಬಿಜೆಪಿ ಯಾವುದೇ ಯಾವ ತನಿಖಾ ಏಜೆನ್ಸಿಯೂ ಅಲ್ಲʼʼ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ʼʼಪರಿಸ್ಥಿತಿಯನ್ನು ಹದಗೆಡಿಸಲು ಹೊಂಚು ಹಾಕಿರುವ ಬಿಜೆಪಿಗರ ಸಂಚನ್ನು ಯಶಸ್ವಿಯಾಗಲು ನಮ್ಮ ಸರ್ಕಾರ ಬಿಡುವುದಿಲ್ಲʼʼ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.