ನ್ಯೂಸ್ ನಾಟೌಟ್: ಮಂಗಳೂರಿನ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಸ್ಥಾನಗಳು ದತ್ತಿ ಇಲಾಖೆಯ ಕಾನೂನಿಗೆ ಒಳಪಡುತ್ತಿದ್ದು, ಜಾತ್ರಾ ಸಂದರ್ಭ ಹಿಂದೂ ವ್ಯಾಪಾರಿಗಳು ಮಾತ್ರ ಸಂತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ದತ್ತನಗರ ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಮಂಗಳಾದೇವಿ ದೇವಸ್ಥಾನದಲ್ಲಿ 2ನೆ ಬಾರಿ ಏಲಂ ಕರೆದು ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದು ಸರಿಯಲ್ಲ. ದತ್ತಿ ಇಲಾಖೆಯ ಕಾನೂನಿನ ಪ್ರಕಾರ ದೇವಸ್ಥಾನಗಳ ರಥಬೀದಿಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ.
ಬಡ ಹಿಂದೂ ವ್ಯಾಪಾರಸ್ಥರು ಈ ಜಾತ್ರೆ ವ್ಯಾಪಾರ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡುವಂತೆ ಮಂಗಳಾದೇವಿ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ವಿನಂತಿಸುವುದಾಗಿ ಅವರು ಹೇಳಿದ್ದಾರೆ.
ಬಡ ಮುಸ್ಲಿಂ ವ್ಯಾಪಾರಿಗಳಿಗೆ ನಮ್ಮ ವಿರೋಧವಿಲ್ಲ. ಕಾರ್ಮಿಕ ಕ್ಷೇತ್ರ ನಮ್ಮ ಹಕ್ಕು. ದತ್ತಿ ಇಲಾಖೆ ಕಾನೂನು ಅನ್ವಯ ರಥಬೀದಿಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ರಥಬೀದಿ ಬಿಟ್ಟು ಬೇರೆ ಕಡೆ ವ್ಯಾಪಾರ ಮಾಡಿದರೆ ಅಭ್ಯಂತರ ಇಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಹಿಂದೂ ಮುಖಂಡ ಶರತ್ ಪಂಪ್ ವೆಲ್ ಮಂಗಳಾದೇವಿ ದೇಗುಲದ ಆವರಣದಲ್ಲಿ ಹಾಕಿದ್ದ ಹಿಂದೂಗಳ ವ್ಯಾಪಾರ ಮಳಿಗೆ ಮತ್ತು ಅಂಗಡಿಗಳಿಗೆ ಕೇಸರಿ ಧ್ವಜ ನೆಟ್ಟು, ಹಿಂದೂಗಳು ಮಾತ್ರ ವ್ಯಾಪಾರ ಮಾಡುವಂತೆ ತಿಳಿಸಿದ್ದಾರೆ.