ನ್ಯೂಸ್ ನಾಟೌಟ್ : ಅಭಿಮಾನಿಗಳಿಂದ ಅಪ್ಪು ಎಂದೇ ಕರೆಸಿಕೊಂಡ ಪುನೀತ್ ರಾಜ್ ಕುಮಾರ್ ಅವರು ತಮ್ಮ ನಟನೆಯಿಂದಲೇ ಎಲ್ಲರ ಮನಸ್ಸನ್ನು ಸೆಳೆದವರು. ಮಾತ್ರವಲ್ಲ,ಇವರೊಬ್ಬ ಸರಳತೆ,ನಡೆ-ನುಡಿ , ಹಿನ್ನಲೆ ಗಾಯಕ,ನಿರ್ಮಾಣ,ಸಾವಿರಾರು ಮಂದಿಯ ಬಾಳಲ್ಲಿ ಬೆಳಕಾದವರು.ಹೀಗಾಗಿ ಇಂದಿಗೂ ಅವರ ಅಭಿಮಾನಿಗಳು ಅವರ ಹೆಸರಲ್ಲಿ ಏನಾದರೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ.ಆದರೆ ರಾಯಚೂರಿನ (Raichur) ರೈತನೋರ್ವನ ಅಭಿಮಾನ ನೋಡಿದ್ರೆ ನೀವು ಬೆರಗಾಗುತ್ತೀರಿ.
ಕಲಾವಿದರೂ ಆಗಿರುವ ಸತ್ಯನಾರಾಯಣ ಎರಡು ಎಕರೆ ಗದ್ದೆಯಲ್ಲಿ ಜಪಾನ್ ತಂತ್ರಜ್ಞಾನ ಮೂಲಕ ವಿವಿಧ ಭತ್ತದ ತಳಿಗಳನ್ನು ಬೆಳೆದು ಅಪ್ಪು ಚಿತ್ರ ಬಿಡಿಸಿದ್ದಾರೆ. ಈ ಮೂಲಕ ಭತ್ತದ ಬೆಳೆಯಲ್ಲಿ ಪುನೀತ್ ರಾಜಕುಮಾರ್ನ ಅವರನ್ನು ಜೀವಂತವಿರಿಸಿದ್ದಾರೆ.
ವಿಶೇಷತೆಯೆಂದರೆ ತೆಲಂಗಾಣ, ಗುಜರಾತ್ನಿಂದ ತಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಹೆಸರಿನ 100 ಕೆ.ಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯವ ಪದ್ಧತಿಯಲ್ಲಿ ಬೆಳೆದು ಅಪ್ಪು ಮೇಲಿನ ಅಭಿಮಾನ ಮೆರೆದರು.ಮಳೆ ಇಲ್ಲದೇ ಬರವನ್ನು ಎದುರಿಸಿದರೂ ಕೂಡ ಬರದ ನಡುವೆಯೇ ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ ಈ ಸಾಧನೆ ಮಾಡಿದ್ದಾರೆ.
ಪ್ರತಿ ನಿತ್ಯವೂ ಅದರ ಬಳಿ ಬಂದು 90 ದಿನದ ಬೆಳೆಯಲ್ಲಿ ಅದ್ಭುತ ಕಲಾಚಿತ್ರ ಮೂಡಿಸಿದ್ದು ಅಚ್ಚರಿ ತರುವಂತಿದೆ.ಇದನ್ನು ವೀಕ್ಷಿಸಲೆಂದೇ ಜನ ಇಲ್ಲಿಗೆ ಬರುವುದಂತು ರೈತನಿಗೆ ಇನ್ನೂ ಖುಷಿಯ ಅನುಭವವನ್ನು ತಂದಿದೆ.ನಿಜವಾದ ಕಲಾವಿದನಿಗೆ ಸಂದ ಗೌರವವಿದಾಗಿದ್ದು,ಜನ ಈ ಭಾವಚಿತ್ರ ನೋಡಿ ಕೊಂಡಾಡುತ್ತಿದ್ದಾರೆ.ಇನ್ನು ಈ ಭಾವ ಚಿತ್ರದ ಕೆಳಗೆ ‘ಕರ್ನಾಟಕ ರತ್ನ’ ಅನ್ನೋ ಅಕ್ಷರಗಳನ್ನ ಬೆಳೆಯಲ್ಲೇ ಬರೆದಿದ್ದು ಇನ್ನೂ ವಿಶೇಷತೆಯಿಂದ ಕೂಡಿದೆ. ಒಂದೊಂದು ಅಕ್ಷರ 40 ಅಡಿ ಇದೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ಉತ್ತಮ ಬೆಳೆ ಬೆಳೆಯುವ ಮೂಲಕ ಅಪ್ಪು ದ್ವಿತೀಯ ಪುಣ್ಯಸ್ಮರಣೆಗೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಸಾಮಾನ್ಯ ಕಣ್ಣಿಗೆ ಕಪ್ಪು, ಹಸಿರು ಬೆಳೆ ಮಾತ್ರ ಕಾಣುತ್ತಿದ್ದರೂ ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ಅಪ್ಪು ಚಿತ್ರ ಮನೋಜ್ಞವಾಗಿ ಮೂಡಿಬಂದಿದೆ.ಸತ್ಯನಾರಾಯಣ ಅವರು ಈಗಾಗಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಅಶ್ವಿನಿಯವರ ಕೈಯಿಂದ ಅಪ್ಪು ಭಾವಚಿತ್ರವನ್ನು ಲೋಕಾರ್ಪಣೆ ಮಾಡಿಸುವ ಇಂಗಿತ ಹೊಂದಿದ್ದಾರೆ. ಒಟ್ಟಿನಲ್ಲಿ ಇಡೀ ದೇಶದಲ್ಲೇ ಅಪರೂಪದ ಕಲೆಯ ಮೂಲಕ ಅಪ್ಪು ಅಭಿಮಾನಿ ತನ್ನ ಅಭಿಮಾನವನ್ನು ಜಗತ್ತಿಗೆ ತೋರಿಸಿದ್ದಾರೆ ಎಂದರೂ ತಪ್ಪಿಲ್ಲ.