ನ್ಯೂಸ್ ನಾಟೌಟ್: ಕರ್ನಾಟಕದ ಪಾಲಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ದಿನೇ ದಿನೇ ಮಳೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಮುಂಬರುವ ಬರದ ಚಿತ್ರಣ ಕಣ್ಣ ಮುಂದೆ ಬರುವ ಆತಂಕ ಎದುರಾಗಿದೆ.
ಮಳೆ ಬೀಳಬೇಕಾದ ಪ್ರದೇಶಗಳಲ್ಲಿ ಸಮರ್ಪಕವಾಗಿ ಮಳೆ ಬರುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹೀಗೆ ಮುಂದುವರಿದರೆ ಮುಂದಿನ ದಿನಗಳು ಹೇಗೆ ಅನ್ನುವ ಆತಂಕ ಎಲ್ಲರಲ್ಲೂ ಕಂಡು ಬರುತ್ತಿದೆ. ಈಗ ರಾಜ್ಯ ಸರ್ಕಾರದಿಂದ (State Government) ಮತ್ತೊಂದು ಸುತ್ತಿನ ಬರ ಪಟ್ಟಿ ಬಿಡುಗಡೆಯಾಗಿದ್ದು, ನಿಜಕ್ಕೂ ಆತಂಕವನ್ನು ಹುಟ್ಟುಹಾಕಿದೆ. ಹಿಂದೆಂದೂ ಕಂಡು ಕೇಳರಿಯದ ಭೀಕರ ಬರಕ್ಕೆ ರಾಜ್ಯ ತುತ್ತಾಗುತ್ತದೆಯೇ (Drought in Karnataka) ಎಂಬ ಭಯ ಕಾಡಲಾರಂಭಿಸಿದೆ. ಕೇಂದ್ರ ಸರ್ಕಾರದ ಬರ ಮಾನದಂಡಗಳ (Central Government drought criteria) ಅನುಸಾರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ರಾಜ್ಯ ಸರ್ಕಾರ ಶಾಕಿಂಕ್ ಮಾಹಿತಿಯನ್ನು ಹಂಚಿಕೊಂಡಿದೆ. ಹೆಚ್ಚುವರಿಯಾಗಿ 21 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಿಸಿದೆ. ಅಲ್ಲದೆ, 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.
161 ಬರಪೀಡಿತ ತಾಲೂಕುಗಳ ಪಟ್ಟಿಗೆ ಹೆಚ್ಚುವರಿಯಾಗಿ 21 ತಾಲೂಕುಗಳ ಸೇರ್ಪಡೆಯಾಗಿದೆ. ಅಂದರೆ ಒಟ್ಟು 182 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಣೆಯಾದಂತೆ ಆಗಿದೆ. ಇನ್ನು 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಘೋಷಿಸಲ್ಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಇರುವ 236 ತಾಲೂಕುಗಳ ಪೈಕಿ 208 ತಾಲೂಕುಗಳು ಈಗ ಬರಕ್ಕೆ ಒಳಗಾಗಿವೆ. ಅಂದರೆ, ಈಗ ಬರದಿಂದ ಬಾಕಿ ಉಳಿದಿರುವುದು ಕೇವಲ 28 ತಾಲೂಕುಗಳು ಮಾತ್ರ! ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಈ ಆದೇಶವನ್ನು ಹೊರಡಿಸಿದ್ದಾರೆ.
ಚಾಮರಾಜನಗರ, ಯಳಂದೂರು, ಕೆ.ಆರ್.ನಗರ, ಬೆಳಗಾವಿ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾಂವಿ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸಿಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ ತಾಲೂಕುಗಳು ಸಂಪೂರ್ಣ ಬರಪೀಡಿತವಾಗಿವೆ.
ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ, ಮಾಲೂರು, ತುಮಕೂರು, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ದೇವದುರ್ಗ, ಮಸ್ಕಿ, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪ,ನರಸಿಂಹರಾಜಪುರ, ಶೃಂಗೇರಿ, ಮಂಗಳೂರು, ಮೂಡಬಿದರೆ, ಬ್ರಹ್ಮಾವರ, ಕಾರವಾರ ತಾಲೂಕುಗಳು ಸಾಧಾರಣ ಬರಪೀಡಿತವಾಗಿವೆ ಎಂದು ಸರ್ಕಾರ ಘೋಷಣೆ ಮಾಡಿದೆ.