ನ್ಯೂಸ್ ನಾಟೌಟ್: ಹುಲಿ ಹೋದಲ್ಲಿ ಇಲಿ ಹೋಯ್ತು ಅನ್ನುವ ಗಾದೆ ಮಾತನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಅರಣ್ಯ ಇಲಾಖೆ ಚೀತಾ ಹಿಡಿಯುವುದಕ್ಕಾಗಿ ಇಟ್ಟಿದ್ದ ಬೋನಿನೊಳಗೆ ಬೀದಿ ನಾಯಿ ಬಿದ್ದು ಕಾರ್ಯಾಚರಣೆಯು ಹಾಸ್ಯದ ಹೊನಲಲ್ಲಿ ತೇಲಿದ ಘಟನೆ ವರದಿಯಾಗಿದೆ.
ಕೊಣಾಜೆ ಸಮೀಪದ ನಡುಪದವು ಬಳಿ ಹಲವರಿಗೆ ಕಾಣಿಸಿದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಬೋನು ಇಟ್ಟು ಆಪರೇಷನ್ ಚೀತಾ ಕಾರ್ಯಾಚರಣೆ ಆರಂಭಿಸಿದ್ದರು, ಆದರೆ ಚಿರತೆ ಬದಲು ಬೋನಲ್ಲಿ ಬೀದಿ ನಾಯಿ ಸೆರೆಯಾಗಿದೆ. ಎರಡು ದಿನಗಳ ಹಿಂದೆ ನಡುಪದವಿನ ಜನನಿಬಿಡ ಪ್ರದೇಶದಲ್ಲಿ ಹಲವು ಮಂದಿಗೆ ಚಿರತೆ ಕಾಣಸಿಕ್ಕಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಶನಿವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಬೋನು ಅಳವಡಿಸಿ ಅಪರೇಷನ್ ಚೀತಾ ಕಾರ್ಯಾಚರಣೆ ಶುರು ಮಾಡಿದ್ದರು.
ಆದರೆ ಭಾನುವಾರ ಬೆಳಗ್ಗೆ ಬೋನಿನ ಬಳಿಯಿಂದ ನಾಯಿ ಬೊಗಳುವ ಶಬ್ದ ಕೇಳಿದ್ದು ಸ್ಥಳೀಯರು ಬಂದು ನೋಡಿದಾಗ ಬೋನಲ್ಲಿ ನಾಯಿ ಬಿದ್ದಿರುವುದು ಪತ್ತೆಯಾಗಿದೆ. ಸ್ಥಳೀಯರು ನಾಯಿಯನ್ನು ಬೋನಿಂದ ಬಂಧ ಮುಕ್ತಗೊಳಿಸಿದ್ದಾರೆ. ಚಿರತೆಗೆಂದು ಇರಿಸಲಾಗಿದ್ದ ಕೋಳಿ ಮಾಂಸವನ್ನು ತಿನ್ನಲು ಬೋನಿಗೆ ನುಗ್ಗಿದ್ದ ನಾಯಿ ಮಾಂಸವನ್ನು ತಿಂದು ಗೂಡಲ್ಲಿ ಲಾಕ್ ಆಗಿತ್ತು.