ನ್ಯೂಸ್ ನಾಟೌಟ್:ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯ ಕಲಿಯುತ್ತಿರುವ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 26 ಗುರುವಾರದಂದು ಕೃಷಿ ಕ್ಷೇತ್ರ ಅಧ್ಯಯನ ಪ್ರವಾಸ ಏರ್ಪಡಿಸಿ ಪುತ್ತೂರು ಮತ್ತು ಉಪ್ಪಿನಂಗಡಿ ಪರಿಸರದ ಕೆಲವು ಕೃಷಿ ಸಾಧಕರನ್ನು ಸಂದರ್ಶಿಸಿ, ಕೃಷಿ ಕ್ಷೇತ್ರ ವೀಕ್ಷಿಸಿ, ಅಲ್ಲಿನ ವಿಶೇಷತೆಗಳನ್ನು ಅವರ ಕೃಷಿ ಸಾಧನೆಗಳನ್ನು ಪರಿಚಯಿಸಿ ಕೊಡಲಾಯಿತು.
ಕೃಷಿ ಕ್ಷೇತ್ರ ಅಧ್ಯಯನದಲ್ಲಿ ಮೊದಲನೆಯದಾಗಿ ಪುತ್ತೂರು ತಾಲೂಕಿನ ಪಾಣಾಜೆ ಸಮೀಪದ ಬೈಂಕ್ರೋಡು ವೆಂಕಟಕೃಷ್ಣ ಭಟ್ (ಮಹೇಶ್ ಭಟ್)ರವರ ಮನೆಗೆ ಭೇಟಿ ನೀಡಿ ಮುಜೆಂಟಿ ಜೇನು ಕೃಷಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಮುಜೆಂಟಿ ಜೇನಿನ ಜೀವನ ಕ್ರಮಗಳು, ಜೇನುಪೆಟ್ಟಿಗೆ ರಚನೆಗಳು, ಕೃಷಿ ಪ್ರಾರಂಭಿಸಲು ಬೇಕಾದ ಅಗತ್ಯ ಪರಿಕರಗಳು, ನಿರ್ವಹಿಸುವ ವಿಧಾನಗಳು ಮತ್ತು ಮುಂಜಾಗ್ರತಾ ಕ್ರಮಗಳು, ಇಲ್ಲಿನ ಅವಕಾಶಗಳು ಮತ್ತು ಜೇನುಹುಳಗಳು ಮಕರಂದ ಹೀರುವ ಪರಾಗಸ್ಪರ್ಶ ಪ್ರಕ್ರಿಯೆಯಿಂದ ನಿಸರ್ಗಕ್ಕಾಗುವ ಪ್ರಯೋಜನಗಳನ್ನು ತಿಳಿದುಕೊಂಡರು. ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.
ಮದ್ಯಾಹ್ನ ಪುತ್ತೂರಿನ ನಿಡ್ಪಳ್ಳಿಯಲ್ಲಿ ಸಾವಯವ ತರಕಾರಿ ಕೃಷಿಯಲ್ಲಿ ಅದ್ಬುತ ಯಶಸ್ಸು ಸಾಧಿಸಿರುವ ಹರಿಕೃಷ್ಣ ಕಾಮತ್ ರನ್ನು ಭೇಟಿ ಮಾಡಲಾಯಿತು. ಮೂಲ ಕೃಷಿ ಪದ್ಧತಿಯಲ್ಲಿ ನೂರಾರು ಬಗೆಯ ತರಕಾರಿಗಳನ್ನು ನಿರಂತರ ಬೆಳೆಸುತ್ತಾ ಹಲವಾರು ಸಂಸ್ಥೆಗಳಲ್ಲಿ ಸಾವಯವ ಪ್ರತಿಪಾದಕರಾಗಿ ಕೆಲಸ ಮಾಡುತ್ತಿರುವ ಅನುಭವಗಳನ್ನು ಹಂಚಿಕೊಂಡರು. ದೇಸಿ ತಳಿ ಹೈನುಗಾರಿಕೆ ಮತ್ತು ಮಿಶ್ರ ಕೃಷಿ ಮೂಲಕ, ಕೃಷಿ ಭಾಗವಾಗಿ ಹೈನೋದ್ಯಮದ ಅಗತ್ಯತೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆ ಪರಿಸ್ಥಿತಿ, ಬದಲಿ ಬೆಳೆಗಳ ಪ್ರಾಮುಖ್ಯತೆ, ನೀರಿನ ಸಂರಕ್ಷಣೆ ಮತ್ತು ವಿವಿಧ ಪ್ರಯೋಜನಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಪಡೆದುಕೊಳ್ಳಲಾಯಿತು.
ಅಪರಾಹ್ನ ಉಪ್ಪಿನಂಗಡಿ ಸಮೀಪ ಕಡಮ್ಮಾಜೆ ಫಾರ್ಮ್ಸ್ ಮಾಲಕರಾದ ಹಲವು ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ದೇವಿಪ್ರಸಾದ್ ಮತ್ತು ಅವರ ಕುಟುಂಬವನ್ನು ಸಂದರ್ಶಿಸಿದಾಗ ಅವರ ಕೃಷಿ ಬದುಕಿನಲ್ಲಿ ಬೆಳೆದು ಬಂದ ದಿನಗಳ ಪ್ರಯತ್ನಗಳನ್ನು ತಿಳಿದುಕೊಂಡು ಮನೆಯಂಗಳದಲ್ಲಿ ನಿರ್ಮಿಸಿದ ಬಹುಸುಂದರ ಉದ್ಯಾನವನ, ವಿವಿಧ ಹಣ್ಣಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಕೋಳಿ ಇನ್ನಿತರ ಪ್ರಾಣಿ ಪಕ್ಷಿಗಳ ಸಂಗ್ರಹ, ಅಡಿಕೆ, ತೆಂಗು, ಕರಿಮೆಣಸು, ಬಾಳೆ ಇತ್ಯಾದಿ ಬೆಳೆಗಳ ಬಹುಬಗೆಯ ತಳಿಗಳು, ವಿನೂತನ ಕೃಷಿ ಪ್ರಯೋಗಗಳು, ಸಾವಯವ ಪದ್ಧತಿಯಲ್ಲಿ ಗಿಡಗಳ ಆರೈಕೆ, ಉಪ್ಪಿನಂಗಡಿ ನಗರದ ಹಸಿ ಕಸವನ್ನು ಸಂಗ್ರಹಿಸಿ ತಂದು ಕಾಂಪೋಸ್ಟ್ ಗೊಬ್ಬರ ತಯಾರಿ, ಎರೆಗೊಬ್ಬರ, ವಿವಿಧ ಮೀನು, ಆಡು, ಹಂದಿ, ಕುರಿ ಸಾಕಾಣಿಕೆ ಇತ್ಯಾದಿ ವೀಕ್ಷಿಸಿ ವಿವರಣೆ ಪಡೆದುಕೊಳ್ಳಲಾಯಿತು. ಇಲ್ಲಿನ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ತೆರಳಿ, ಕುಕ್ಕುಟ ಉದ್ಯಮ ಪ್ರಾರಂಭ ಮತ್ತು ನಿರ್ವಹಣೆ ಹಾಗೂ ಸರಾಸರಿ ಲಾಭಾಂಶದ ವಿವರಣೆ ಪಡೆದುಕೊಳ್ಳಲಾಯಿತು.
ಅಧ್ಯಯನ ಪ್ರವಾಸದಲ್ಲಿ ಭೇಟಿ ನೀಡಿದ ಎಲ್ಲ ಕೃಷಿ ಸಾಧಕರಿಗೆ ಸ್ಮರಣಿಕೆಯಾಗಿ ಅಶೋಕ ವೃಕ್ಷ ಮತ್ತು ಕೃಷ್ಣ ಪಾರಿಜಾತ ಗಿಡಗಳನ್ನು ನೀಡಿ ಗೌರವಿಸಲಾಯಿತು. ಈ ಶಿಬಿರದ ನೇತೃತ್ವವನ್ನು ಎನ್ನೆಂಸಿ ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ ಹಾಗೂ ಉಪನ್ಯಾಸಕರಾದ ಅಕ್ಷತಾ ಬಿ, ಭವ್ಯ ಪಿ ಎಮ್, ಕೃತಿಕಾ ಕೆ ಜೆ, ಅಜಿತ್ ಕುಮಾರ್ ಮತ್ತು ಪಲ್ಲವಿ ವಹಿಸಿದ್ದರು. ಕಾಲೇಜು ಸಿಬ್ಬಂದಿ ಭವ್ಯ ಮತ್ತು ದೀಪಕ್ ಸಹಕರಿಸಿದರು.