ನ್ಯೂಸ್ ನಾಟೌಟ್: ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂದರ್ಭ ಮತೀಯ ಸೌಹಾರ್ದಕ್ಕೆ ಧಕ್ಕೆ ತರುವ ಚಟುವಟಿಕೆ ನಡೆಸಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ನ ಶರಣ್ ಪಂಪ್ವೆಲ್ ಮತ್ತಿತರರ ವಿರುದ್ಧ ಪಾಂಡೇಶ್ವರ ಪೊಲೀಸರು ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.
ಅ.16ರಂದು ಮಂಗಳಾದೇವಿ ದೇವಸ್ಥಾನದ ಬಳಿಯ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಶರಣ್ ಪಂಪ್ವೆಲ್ ಮತ್ತಿತರರು ಕೇಸರಿ ಧ್ವಜ ಕಟ್ಟಿ ಹಿಂದೂಗಳ ಅಂಗಡಿಗಳಲ್ಲೇ ವ್ಯಾಪಾರ ನಡೆಸುವಂತೆ ಕರೆ ನೀಡಿದ್ದರು ಎನ್ನಲಾಗಿದೆ ಮತ್ತು ಈ ಸಂಬಂಧ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಇದರ ವಿರುದ್ಧ ಮಂಗಳೂರಿನ ಸಮಾನ ಮನಸ್ಕರ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ಗೆ ಮನವಿ ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.ಆ ಬಳಿಕ ಶರಣ್ ಪಂಪ್ವೆಲ್ ಮತ್ತಿತರರ ವಿರುದ್ಧ ಪಾಂಡೇಶ್ವರ ಪೊಲೀಸರು ಬುಧವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
ಇದರ ವಿರುದ್ಧ ಶರಣ್ ಪಂಪ್ವೆಲ್ ಹೈಕೋರ್ಟ್ ಮೆಟ್ಟಿಲೇರಿದ್ದು, ಪೊಲೀಸರು ದಾಖಲಿಸಿದ ಸ್ವಯಂಪ್ರೇರಿತ ದೂರಿಗೆ ಗುರುವಾರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ವರದಿ ತಿಳಿಸಿದೆ.