ನ್ಯೂಸ್ನಾಟೌಟ್: ನೃತ್ಯ ಮತ್ತು ಸಂಸೃತಿಗೆ ಬಹಳ ನಿಕಟ ಸಂಬಂಧವಿರುವುದಂತೂ ನಿಜ. ಯಕ್ಷಗಾನದಲ್ಲಿ, ಕೋಲಾಟದಲ್ಲಿ, ಭರತನಾಟ್ಯದಲ್ಲಿ ಹೀಗೆ ನೃತ್ಯಗಳು ಆಯಾಯ ಸ್ಥಳದ ಸಂಸ್ಕೃತಿಗೆ ತಕ್ಕಂತೆ ಬದಲಾಗುತ್ತವೆ ಮತ್ತು ಅದರ ಆಚರಣೆಯಲ್ಲಿ ವಿಭಿನ್ನತೆಗಳಿರುತ್ತವೆ. ಆದರೆ, ಆಚರಣೆ ಅತಿಯಾಗಿದ್ದರೆ ಅನಾಹುತಗಳು ಸೃಷ್ಟಿಯಾಗುತ್ತವೆ.
ನವರಾತ್ರಿ (Navarathri) ಹಬ್ಬವನ್ನು ಗುಜರಾತ್ (Gujarat) ರಾಜ್ಯದ ಬಹುಪಾಲು ಭಾಗಗಗಳಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈ ವೇಳೆ ಗರ್ಭಾ ನೃತ್ಯ ಕಾರ್ಯಕ್ರಮಗಳು ಬಹಳಷ್ಟು ಕಡೆ ನಡೆಯುತ್ತಿರುತ್ತವೆ. ಗರ್ಬಾ ನೃತ್ಯ ಸಮಾರಂಭಗಳಲ್ಲಿ ಯುವಕರು ಮತ್ತು ಹಿರಿಯರು ಭಾಗವಹಿಸುತ್ತಿದ್ದಾರೆ.
ಆದರೆ ಈ ನಡುವೆ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಕೆಲವರು ಹೃದಯಾಘಾತದಿಂದ (Heart Attack) ಕುಸಿದು ಬೀದ್ದಿದ್ದಾರೆ. ರಾಜ್ಯದ ಪ್ರಸಿದ್ಧ ಗರ್ಬಾ ಆಚರಣೆ ಇಂದು ಸಾಕಷ್ಟು ಕುಟುಂಬಗಳಲ್ಲಿ ದುಃಖವನ್ನು ತರಿಸುತ್ತಿದೆ. ತಮ್ಮ ಮುಂದೆಯೇ ಖುಷಿಯಿಂದ ನಗುನಗುತ್ತಾ ಕುಣಿದು ಕುಪ್ಪಳಿಸುತ್ತಿದ್ದವರು ದಿಢೀರ್ ಬಿದ್ದು ಸಾವಿಗೀಡಾಗಿರುವುದು ಹಲವರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಗುಜರಾತ್ನಲ್ಲಿ ಕಳೆದ 24 ಗಂಟೆಗಳಲ್ಲಿ 10 ಮಂದಿ ಗರ್ಬಾ ಆಚರಣೆಯಲ್ಲಿ ಪಾಲ್ಗೊಂಡು ದುರಂತ ಅಂತ್ಯ ಕಂಡಿದ್ದಾರೆ. ಈ ರೀತಿ ಸಾವನ್ನಪ್ಪುತ್ತಿರುವವರಲ್ಲಿ ಹೆಚ್ಚಿನವರು ಹದಿಹರೆಯದವರಿಂದ ಮಧ್ಯವಯಸ್ಕ ಜನರು ಎಂಬುದು ಮತ್ತೊಂದು ಗಮನಾರ್ಹ ಸಂಗತಿ.
ಶುಕ್ರವಾರ ಅಹಮದಾಬಾದ್ನ 24 ವರ್ಷದ ಯುವಕ ಗರ್ಬಾ ಆಡುತ್ತಿದ್ದಾಗ ಹಠಾತ್ ಕುಸಿದು ಕೊನೆಯುಸಿರೆಳೆದಿದ್ದಾರೆ. ಅದೇ ರೀತಿ ಕಪದ್ವಾಂಜ್ನ 17 ವರ್ಷದ ಬಾಲಕ ಕೂಡ ಗರ್ಬಾ ಆಡುವಾಗ ಕೊನೆಯುಸಿರೆಳೆದಿದ್ದಾರೆ.