ನ್ಯೂಸ್ ನಾಟೌಟ್ : ಸಿಕ್ಕಿಂನಲ್ಲಿ ಮೇಘಸ್ಫೋಟ ಸಂಭವಿಸಿ 23 ಯೋಧರು ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ.ತೀಸ್ತಾ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ಈ ದುರಂತ ಸಂಭವಿಸಿದೆ. ಯೋಧರ ಪತ್ತೆಗೆ ವ್ಯಾಪಕ ಶೋಧ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸೇನೆಯ ಪೂರ್ವ ವಲಯದ ಕಮಾಂಡ್ ‘ಚುಂಗ್ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿರುವುದರಿಂದ ಈ ಅಪಾಯ ಸಂಭವಿಸಿದೆ. ನೀರಿನ ಮಟ್ಟವು 15-20 ಅಡಿ ಹಠಾತ್ ಹೆಚ್ಚಳಕ್ಕೆ ಬಂದಿದ್ದು, ಪರಿಣಾಮವಾಗಿ ಇದು ಸಿಂಗ್ಟಾಮ್ ಬಳಿಯ ಬರ್ದಂಗ್ನಲ್ಲಿ ನಿಲ್ಲಿಸಿದ್ದ ಸೇನಾ ವಾಹನಗಳಿಗೆ ಭಾರಿ ಸಮಸ್ಯೆಗಳಾಗಿವೆ.ಇದರಿಂದಾಗಿ 23 ಸಿಬ್ಬಂದಿ ಕಾಣೆಯಾಗಿದ್ದು, ಕೆಲವು ವಾಹನಗಳು ಕೆಸರಿನಲ್ಲಿ ಮುಳುಗಿವೆ ಎಂದು ತಿಳಿದು ಬಂದಿದೆ.ಈ ಕುರಿತು ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಸೇನೆ ಹೇಳಿದೆ.
ರಾತ್ರಿಯಿಡೀ ಸುರಿದ ವಿಪರೀತ ಮಳೆಯಿಂದಾಗಿ ಉತ್ತರ ಸಿಕ್ಕಿಂನಲ್ಲಿರುವ ಲೊನಾಕ್ ಸರೋವರದ ಬಳಿ ಮೇಘಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.ಹೀಗಾಗಿ ಸಿಕ್ಕಿಂ ಆಡಳಿತ ನಿವಾಸಿಗಳಿಗೆ ಹೈ ಅಲರ್ಟ್ ನೀಡಿದೆ.
ನದಿ ಭಯಾನಕವಾಗಿ ಉಕ್ಕಿ ಹರಿಯುತ್ತಿರುವ ಕಾರಣ ತೀಸ್ತಾ ನದಿಯ ಮೇಲಿನ ಸಿಂಗ್ತಮ್ ಕಾಲು ಸೇತುವೆ ಕುಸಿದಿದೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಆಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಕೆಳಗಿನ ಜಲಾನಯನ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ.ಘಟನೆಗೆ ಸಂಬಂಧಿಸಿ ಸಿಕ್ಕಿಂ ಸರ್ಕಾರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ.ತೀಸ್ತಾ ನದಿಯಿಂದ ದೂರ ಉಳಿಯುವಂತೆಯೂ ಜನರಿಗೆ ಎಚ್ಚರಿಕೆ ನೀಡಿದೆ.