ನ್ಯೂಸ್ ನಾಟೌಟ್: ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು (ಅ.10) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಭಾರತವು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳಲ್ಲಿ ಖಂಡಿಸುತ್ತದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ತಮಗೆ ಕರೆ ಮಾಡಿ ಇಸ್ರೇಲ್ನ ಬೆಳವಣಿಗೆಗಳ ಮಾಹಿತಿ ನೀಡಿದರು ಎಂದಿದ್ದಾರೆ. “ಈ ಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್ನೊಂದಿಗೆ ದೃಢವಾಗಿ ಬೆಂಬಲಕ್ಕೆ ನಿಲ್ಲುತ್ತಾರೆ. ಭಾರತವು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಬಲವಾಗಿ ಮತ್ತು ನಿಸ್ಸಂದೇಹವಾಗಿ ಖಂಡಿಸುತ್ತದೆ” ಎಂದು ಪ್ರಧಾನಿ ಬರೆದಿದ್ದಾರೆ.
ನೆತನ್ಯಾಹು ಅವರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಬಗ್ಗೆ ಪ್ರಧಾನಿ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ನ ವಿದೇಶಾಂಗ ಸಚಿವಾಲಯ, “ಥ್ಯಾಂಕ್ ಯು ಪ್ರಧಾನಿ ನರೇಂದ್ರ ಮೋದಿ” ಎಂದು ಪೋಸ್ಟ್ ಮಾಡಿದೆ. ಇದಕ್ಕೂ ಮುನ್ನ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆದ ನಂತರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, “ಭಯೋತ್ಪಾದಕ ದಾಳಿಯ ಸುದ್ದಿಯಿಂದ ಆಘಾತವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಭಾರತದ ಬೆಂಬಲ ಸದಾ ಇಸ್ರೇಲ್ ಜೊತೆಗೆ ಇರುತ್ತದೆ” ಎಂದು ಹೇಳಿದ್ದರು.
ಭಾರತವು 1950 ರಲ್ಲಿ ಇಸ್ರೇಲ್ ಅನ್ನು ಒಂದು ದೇಶವಾಗಿ ಮಾನ್ಯತೆ ನೀಡಿತ್ತು. ಆದಾಗ್ಯೂ ಎರಡೂ ದೇಶಗಳ ಮಧ್ಯೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳು ಆರಂಭವಾಗಲು ದಶಕಗಳೇ ಹಿಡಿದವು. 1992 ರಲ್ಲಿ ಔಪಚಾರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ, ಇಸ್ರೇಲ್ನೊಂದಿಗೆ ರಕ್ಷಣಾ ಮತ್ತು ವ್ಯಾಪಾರ ಸಂಬಂಧಗಳು ಪ್ರಾರಂಭವಾದವು ಮತ್ತು ಇಸ್ರೇಲ್ ಶೀಘ್ರದಲ್ಲೇ ಭಾರತದ ಎರಡನೇ ಅತಿದೊಡ್ಡ ರಕ್ಷಣಾ ಪಾಲುದಾರ ದೇಶವಾಗಿ ಬದಲಾಗಿತ್ತು.
ಆದರೆ 2014 ರಲ್ಲಿ ಮೋದಿ ಪ್ರಧಾನಿಯಾದ ನಂತರ ಇಸ್ರೇಲ್ನೊಂದಿಗಿನ ಸಂಬಂಧವು ಸ್ನೇಹಪರ ತಿರುವು ಪಡೆಯಲು ಪ್ರಾರಂಭಿಸಿತು. 2015 ಮತ್ತು 2016 ರಲ್ಲಿ ಯುದ್ಧಾಪರಾಧಗಳಿಗಾಗಿ ಇಸ್ರೇಲ್ ಅನ್ನು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮುಂದೆ ತರಬೇಕೇ ಎಂದು ಚರ್ಚಿಸುವ ವಿಶ್ವಸಂಸ್ಥೆಯ ಮತದಾನದಿಂದ ಭಾರತ ದೂರ ಉಳಿದಿತ್ತು.
2017ರಲ್ಲಿ ಇಸ್ರೇಲ್ ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದರು. ಇಂದು ಉಭಯ ದೇಶಗಳ ಸಂಬಂಧವು ಪ್ರವಾಸೋದ್ಯಮದಿಂದ ಮಿಲಿಟರಿಯವರೆಗೆ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.