ನ್ಯೂಸ್ ನಾಟೌಟ್ : ಮನೆ ಬಳಿ ಹಾವುಗಳು ಬಂದಾಗ ಒಂದು ಕ್ಷಣ ಗಾಬರಿಯಾಗುತ್ತೇವೆ.ಅದರ ಮಧ್ಯೆಯೂ ವಿಷಕಾರಕ ಹಾವುಗಳು ಮನೆ ಬಿಟ್ಟು ದೂರ ಹೋಗದೇ ಇದ್ದಾಗ ನಾವು ಉರಗ ರಕ್ಷಕರನ್ನು ನೆನಪು ಮಾಡಿಕೊಳ್ಳುತ್ತಾ ಅವರಿಗೆ ಕಾಲ್ ಮಾಡುತ್ತೇವೆ.ತಕ್ಷಣ ಅವರು ಮನೆಗೆ ಭೇಟಿ ನೀಡುವಾಗ ಹೋದ ಜೀವ ಮರಳಿ ಬಂದಂತಹ ಭಾವನೆ.ನಮ್ಮೆಲ್ಲಾ ಭಯವನ್ನು ಹೋಗಲಾಡಿಸುವ ಉರಗ ರಕ್ಷಕರು ನಮ್ಮ ಪಾಲಿಗೆ ದೇವರಾಗುತ್ತಾರೆ.
ಆದರೆ ಇಲ್ಲೊಂದು ಕಡೆ ಅದೇ ಉರಗ ತಜ್ಞರು ಹಾವು ಹಿಡಿಯುವ ವೇಳೆ ಭಾರಿ ದೊಡ್ಡ ಅವಘಡ ಸಂಭವಿಸಿದೆ.ನಾಗರಹಾವನ್ನು ರಕ್ಷಿಸುವ ವೇಳೆ ಉರಗ ರಕ್ಷಕನಿಗೇ ಹಾವು ಕಚ್ಚಿದ ಪರಿಣಾಮ ಅವರ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ಹತ್ತಿರದ ಮನೆ ಬಳಿ ಬಂದಿದ್ದ ನಾಗರಹಾವನ್ನು ಹಿಡಿಯಲು ಹೋದ ಉರಗ ತಜ್ಞನಿಗೆ ಹಾವು ಕಡಿದಿದೆ.ಇದರ ಪರಿಣಾಮ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ರಾತ್ರಿ ಸಮಯದಲ್ಲಿ ಮನೆಯ ಸಮೀಪ ಕಾಣಿಸಿಕೊಂಡ ನಾಗರಹಾವು ಹೋಗದೆ ಇರುವುದರಿಂದ ಉರಗತಜ್ಞ ಅಬು ತಲಾ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಅಬು ತಲಾ ಹಾವಿನ ರಕ್ಷಣೆಗೆ ಮುಂದಾಗಿದ್ದಾರೆ. ಹಾವನ್ನು ಹಿಡಿಯುವಾಗ ಆಕಸ್ಮಿಕವಾಗಿ ಕೈ ಭಾಗಕ್ಕೆ ಹಾವು ಕಚ್ಚಿದೆ. ಆದರೂ ಹಾವನ್ನು ಹಿಡಿದ್ದಾರೆ. ನಂತರ ಅವರನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅವರ ಸ್ಥಿತಿ ಗಂಭೀರವಾಗಿದ್ದುದರಿಂದ ಕೂಡಲೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.