ನ್ಯೂಸ್ ನಾಟೌಟ್ : ರತ್ನಖಚಿತ ಸಿಂಹಾಸನ ಜೋಡಣೆ, ಖಾಸಗಿ ದರ್ಬಾರ್, ಅರಮನೆಯಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ರಾಜವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ನಡೆಸುವ ರಾಜ ಪರಂಪರೆಯ ಶರನ್ನವರಾತ್ರಿಯ ಪೂಜಾ ವಿವರಗಳು ಪ್ರಕಟಿಸಲಾಗಿದೆ.
ಅ. 9ರಂದು ರತ್ನ ಖಚಿತ ಸಿಂಹಾಸನ ಜೋಡಣೆ ನಡೆಯಲಿದ್ದು, ಅ. 9ರಂದು ಅರಮನೆಯ ದರ್ಬಾರ್ ಹಾಲ್ನಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಗೆಜ್ಜಗಳ್ಳಿಯ ನುರಿತ ಕೆಲಸಗಾರರಿಂದ ಆಗಲಿದೆ. ಅದಕ್ಕೂ ಮುನ್ನ ಅರಮನೆಯಲ್ಲಿ ಬೆಳಗ್ಗೆಯಿಂದಲೇ ನವಗ್ರಹ ಪೂಜೆ, ಹೋಮಹವನಗಳು ನಡೆಯಲಿವೆ. ಆನಂತರ ಅರಮನೆಯ ನೆಲ ಮಾಳಿಗೆಯ ಸ್ಟ್ರಾಂಗ್ ರೂಂನಲ್ಲಿರುವ ಬಿಡಿ ಬಿಡಿ ಭಾಗದ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್ಗೆ ತಂದು, 10.05ರಿಂದ 10.35ರ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ನಡೆಯಲಿದೆ. ಆನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಅರಮನೆಗೆ ಆಗಮಿಸಲಿದ್ದು, ಅವುಗಳಿಗೆ ಪೂಜೆ ಸಲ್ಲಿಸಲಿದ್ದಾರೆ.
ಅ. 15ರಂದು ಖಾಸಗಿ ದರ್ಬಾರ್ ನಡೆಯಲಿದ್ದು, ಅರಮನೆಯ ರಾಜಪರಂಪರೆಯಂತೆ ಶರನ್ನವರಾತ್ರಿಯ ಮೊದಲ ದಿನ ಅ. 15ರಂದು ಅರಮನೆಯ ದರ್ಬಾರ್ ಹಾಲ್ನಲ್ಲಿರುವ ರತ್ನ ಖಚಿತ ಆಸನಕ್ಕೆ ಅಂದು ಬೆಳಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹ ಜೋಡಣೆ ಮಾಡಲಾಗುತ್ತದೆ.
ಅ. 20ಕ್ಕೆ ಸರಸ್ವತಿ ಪೂಜೆ ನಡೆಯಲಿದೆ, ರಾಜ ವಂಶಸ್ಥರು ಬಳಸುತ್ತಿದ್ದ ವೀಣೆ, ಧರ್ಮ ಗ್ರಂಥಗಳನ್ನು ಶಾರದಾ ದೇವಿಯ ಫೋಟೋದ ಮುಂದೆ ಇಟ್ಟು ವಿದ್ಯಾ ದೇವತೆಯಾದ ಸರಸ್ವತಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಅ. 21ರಂದು ಕಾಳರಾತ್ರಿ ಪೂಜೆ ಹಾಗೂ 22ರಂದು ದುರ್ಗಾಷ್ಠಮಿ ಪೂಜೆ ನೆರವೇರಲಿವೆ. ರಾಜ ವಂಶಸ್ಥರು ಈ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಿದ್ದಾರೆ.
ಅ. 23ರಂದು ಆಯುಧ ಪೂಜೆ ನಡೆಯಲಿದೆ, ಅರಮನೆಯ ಶರನ್ನವರಾತ್ರಿಯ ಪ್ರಮುಖ ಪೂಜೆ ಆಯುಧ ಪೂಜೆ. ಅಂದು ಬೆಳಗ್ಗೆ ಅರಮನೆಯಲ್ಲಿ ಚಂಡಿಕಾ ಹೋಮ ಪೂಜೆ ನಡೆಯಲಿದೆ. ಬೆಳಗ್ಗೆ 5.30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಅರಮನೆಯ ಆನೆ ಬಾಗಿಲಿಗೆ ಆಗಮಿಸಿ, ಅರಮನೆಯಲ್ಲಿರುವ ಖಾಸಾ ಆಯುಧಗಳನ್ನು ಬೆಳಗ್ಗೆ 6.05ರಿಂದ 6.15ರವರೆಗಿನ ಸಮಯದಲ್ಲಿ ಅರಮನೆಯ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಖಾಸಾ ಆಯುಧಗಳನ್ನು ಸ್ವಚ್ಛಗೊಳಿಸಿ, ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಸ್ ತರಲಾಗುವುದು. ನಂತರ 11.45ಕ್ಕೆ ಪುನಃ ಅರಮನೆಯ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಿದಾಗ ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ಅ. 24ರ ಮಂಗಳವಾರ ವಿಜಯದಶಮಿ, ರಾಜ ಪರಂಪರೆಯಂತೆ ಅ. 24ರಂದು ಅರಮನೆಯ ಆನೆ ಬಾಗಿಲಿನಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಕಲ್ಯಾಣ ಮಂಟಪಕ್ಕೆ ಆಗಮಿಸಲಿದೆ. ಅಲ್ಲಿಂದ ರಾಜರು ಬಳಸುತ್ತಿದ್ದ ಆಯುಧಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಇಟ್ಟು, 11ರಿಂದ 11.40ರ ಶುಭ ಸಮಯದಲ್ಲಿ ವಿಜಯದಶಮಿ ಮೆರವಣಿಗೆ ಆನೆ ಬಾಗಿಲಿನಿಂದ ಅರಮನೆಯ ಒಳಗಡೆ ಇರುವ ಭುವನೇಶ್ವರಿ ದೇವಾಲಯದವರೆಗೆ ರಾಜ ವಂಶಸ್ಥರು ಮೆರವಣಿಗೆಯಲ್ಲಿ ಆಗಮಿಸಿ ದೇವಾಲಯದ ಆವರಣದಲ್ಲಿರುವ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಲಿದ್ದಾರೆ.