ನ್ಯೂಸ್ ನಾಟೌಟ್: ಜೀವಂತ ಏಡಿಗಳನ್ನು ವಿಮಾನದ ಮೂಲಕ ಚೀನಾಕ್ಕೆ ರಫ್ತು ಮಾಡಿರುವ ವಿಚಾರ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮಂಗಳೂರಿನ ಜೀವಂತ ಏಡಿಗಳಿಗೆ ಚೀನಾದಲ್ಲಿದೆಯಂತೆ ಭಾರಿ ಬೇಡಿಕೆ ಅನ್ನುವ ವಿಚಾರವೂ ಮತ್ತಷ್ಟು ಬೆರಗುಗೊಳಿಸಿದೆ. ಭಾರತದ ಸಾಗರೋತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಬೇಡಿಕೆ ಹೆಚ್ಚಿಸಿಕೊಂಡಿದೆ ಅನ್ನುವುದನ್ನು ತಿಳಿಯಬಹುದು.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಸಮಗ್ರ ಸರಕು ಟರ್ಮಿನಲ್ (ಐಸಿಟಿ) ಕಾರ್ಯಾರಂಭ ಮಾಡಿದೆ. ಇದಾದ ಬಳಿಕ ಸ್ಥಳೀಯ ಸಾಗರೋತ್ಪನ್ನ ರಫ್ತುದಾರರು ಈ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾಗರೋತ್ಪನ್ನಗಳ ವ್ಯಾಪಾರೋದ್ಯಮಿಯೊಬ್ಬರು ಜೀವಂತ ಏಡಿಗಳನ್ನು ವಿಮಾನದ ಮೂಲಕ ರವಾನೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಸಾಗರೋತ್ತರ ಗ್ರಾಹಕರಿಗೆ ಇಲ್ಲಿನ ಸಾಗರೋತ್ಪನ್ನಗಳನ್ನು ಸಾಗಿಸಲು ಐಸಿಟಿ ವರದಾನವಾಗಿದೆ. ವಿಶೇಷವಾಗಿ ಏಡಿಗಳನ್ನು ಕೋಲ್ಕತ್ತಕ್ಕೆ ಸಾಗಿಸಿ, ಅಲ್ಲಿಂದ ಚೀನಾಕ್ಕೆ ರಫ್ತು ಮಾಡಲು ನಮಗೆ ಈ ಸರಕು ಟರ್ಮಿನಲ್ ಪ್ರಯೋಜನಕಾರಿ’ ಎನ್ನುತ್ತಾರೆ ಸಾಗರೋತ್ಪನ್ನಗಳ ವ್ಯಾಪಾರೋದ್ಯಮಿ ಫಯಾಜ್.
ಏಡಿಗಳು ಎಷ್ಟು ದಿನ ಬದುಕಿರುತ್ತವೆ..?
ಸಮುದ್ರದ ನೀರಿನಿಂದ ಹೊರತೆಗೆದ ಬಳಿಕ ಏಡಿಗಳು ನಾಲ್ಕೈದು ದಿನಗಳ ತನಕ ಜೀವಂತವಾಗಿರುತ್ತದೆ. ಎರಡು ದಿನಗಳಿಗೊಮ್ಮೆ 150 ಕೆ.ಜಿ.ಯಿಂದ 300 ಕೆ.ಜಿ.ಗಳಷ್ಟು ಜೀವಂತ ಏಡಿಗಳನ್ನು ಕೋಲ್ಕತ್ತಕ್ಕೆ ರಫ್ತು ಮಾಡಲಾಗುತ್ತದೆ. ಮೀನುಗಾರರಿಗೆ ಪ್ರತಿ ಕೆ.ಜಿ. ಏಡಿಗೆ ಸರಾಸರಿ ₹300 ನೀಡಬೇಕಾಗುತ್ತದೆ. ವಿಮಾನ ಶುಲ್ಕ ಹಾಗೂ ಅವುಗಳ ನಿರ್ವಹಣೆಗೆ ಪ್ರತಿ ಕೆ.ಜಿ.ಗೆ ₹100ರಿಂದ ₹ 150 ವೆಚ್ಚವಾಗುತ್ತದೆ ಎಂದು ಏಡಿ ವ್ಯಾಪಾರಸ್ಥರು ತಿಳಿಸಿದ್ದಾರೆ.
ಸತ್ತ ಏಡಿಗಳನ್ನು ರಫ್ತು ಮಾಡಲ್ಲ
ಕಳುಹಿಸುವ ಏಡಿಗಳಲ್ಲಿ ಕೆಲವು ಕೋಲ್ಕತ್ತ ತಲುಪುವಷ್ಟರಲ್ಲಿ ಸಾಯುವುದೂ ಉಂಟು. ಸತ್ತ ಏಡಿಗಳನ್ನು ಬಿಸಾಡಬೇಕಾಗುತ್ತದೆ. ವಿಮಾನದ ಮೂಲಕ ಏಡಿಗಳನ್ನು ಕಳುಹಿಸುವ ಸೇವೆ ಆರಂಭವಾದ ಬಳಿಕ ಇಲ್ಲಿಂದ ನಾಲ್ಕೈದು ಗಂಟೆಗಳಲ್ಲಿ ಕೋಲ್ಕತ್ತಕ್ಕೆ ಏಡಿಗಳನ್ನು ಕಳುಹಿಸಲು ಸಾಧ್ಯವಾಗುತ್ತಿದೆ. ಅವು ಸಾಯುವ ಪ್ರಮಾಣವೂ ಕಡಿಮೆಯಾಗಿರುತ್ತದೆ. ‘ವಿಮಾನ ನಿಲ್ದಾಣದ ಐಸಿಟಿ ಈ ವರ್ಷದ ಮೇ 1 ರಂದು ಉದ್ಘಾಟನೆಯಾಗಿತ್ತು.