ನ್ಯೂಸ್ ನಾಟೌಟ್ : ಇತ್ತೀಚೆಗೆ ಗಾಯಗೊಂಡು ನರಳಾಡುತ್ತಿದ್ದ ಹಾವನ್ನು ಮಂಗಳೂರಿನ ವೈದ್ಯರೊಬ್ಬರು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಗುಣ ಪಡಿಸಿದ್ದರು.ಇದೀಗ ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದ ಹೆಬ್ಬಾವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಮಂಗಳೂರಿನ ವೈದ್ಯರ ತಂಡ ಗಮನ ಸೆಳೆದ ಸುದ್ದಿ ಎಲ್ಲೆಡೆ ವೈರಲಾಗುತ್ತಿದೆ.
ಮಂಗಳೂರಿನ ಕದ್ರಿಯಲ್ಲಿ ಈ ಘಟನೆ ವರದಿಯಾಗಿದ್ದು,ಸುಮಾರು ೧೩ ಕೆಜಿ ತೂಕದ ಹೆಬ್ಬಾವೊಂದು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಈ ವೇಳೆ ಹೆಬ್ಬಾವನ್ನು ಗಮನಿಸಿದ ಉರಗ ರಕ್ಷಕ ಧೀರಜ್ ಗಾಣಿಗ ರಕ್ಷಣೆ ಮಾಡಿದರು.ಕೂಡಲೇ ವೈದ್ಯರಲ್ಲಿಗೆ ತಂದಿದ್ದರು. ಬಳಿಕ ಸ್ಕ್ಯಾನ್ ಮಾಡಿ ನೋಡಿದಾಗ ಹೆಬ್ಬಾವಿನ ಹೊಟ್ಟೆಯಲ್ಲಿ ಮಲ ತುಂಬಿರುವುದು ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.
ಈ ಬಗ್ಗೆ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಗೆ ಮುಂದಾಯಿತು.ಬರೋಬ್ಬರಿ 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹೆಬ್ಬಾವು ಹೊಟ್ಟೆಯಲ್ಲಿದ್ದ ಮಲವನ್ನು ಹೊರ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.ಬಳಿಕ ಹೆಬ್ಬಾವು ಚೇತರಿಸಿಕೊಂಡಿದ್ದು, ಅದನ್ನು ಮರಳಿ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ವೈದ್ಯ ಮೂಲಗಳು ತಿಳಿಸಿವೆ.
ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್ ಹಾಗೂ ಸಮೀಕ್ಷಾ ರೆಡ್ಡಿ ತಂಡದಿಂದ ಹೆಬ್ಬಾವಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದ್ದು, ವೈದ್ಯರ ತಂಡಕ್ಕೆ ಇದೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.