ನ್ಯೂಸ್ ನಾಟೌಟ್: ದುಬೈನಿಂದ ಬಜಪೆಯಲ್ಲಿ ಬಂದಿಳಿದ ವಿಮಾನದ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಕಸ್ಟಮ್ಸ್ ಅಧಿಕಾರಿಗಳ ಈ ತಪಾಸಣೆ ವೇಳೆ ಮಹಿಳೆಯೊಬ್ಬಳ ಸೊಂಟದ ಭಾಗದಿಂದ ಬೀಪ್ ಸೌಂಡ್ ಕೇಳಿ ಬಂದಿದೆ. ತಕ್ಷಣ ಹೆಚ್ಚಿನ ತಪಾಸಣೆ ನಡೆಸಿದಾಗ ಆಕೆಯ ಗುದದ್ವಾರದ ಬಳಿ ಅಂಡಾಕಾರದ ಎರಡು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ತೆಗೆದು ನೋಡಿದಾಗ ಅದರಲ್ಲಿ ಚಿನ್ನವನ್ನು ಬಚ್ಚಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿತು. ತಕ್ಷಣ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು.
‘ದುಬೈನಿಂದ ಬಂದಿಳಿದ ಐಎಕ್ಸ್ 814 ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಪ್ರಯಾಣಿಸಿದ್ದ ಮಹಿಳೆಯ ಸೊಂಟದ ಭಾಗದ ಬಳಿ ಲೋಹಶೋಧಕ ಸಲಕರಣೆ ಹಿಡಿದು ತಪಾಸಣೆಗೆ ಒಳಪಡಿಸಿದಾಗ ಬೀಪ್ ಶಬ್ದ ಬಂದಿತ್ತು.
ಚಿನ್ನವನ್ನು ಕಳ್ಳಸಾಗಣೆ ಮಾಡಿರುವ ಸುಳಿವು ಸಿಕ್ಕಿದ್ದರಿಂದ ಆಕೆಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಆಗ ಆಕೆಯು ಗುದದ್ವಾರದಲ್ಲಿ ಅಂಡಾಕಾರದ ಎರಡು ವಸ್ತುಗಳನ್ನು ಬಚ್ಚಿಕೊಂಡು ಸಾಗಿಸುತ್ತಿರುವುದು ಕಂಡುಬಂತು’ ಎಂದು ಕಸ್ಟಮ್ಸ್ ಟ್ವೀಟ್ ಮಾಡಿದೆ.
‘ಅಂಡಾಕಾರದ ವಸ್ತುಗಳನ್ನು ಗುದದ್ವಾರದಿಂದ ಹೊರಗೆ ತೆಗೆಯಿಸಿ ಪರಿಶೀಲಿಸಲಾಯಿತು. ಮಹಿಳೆಯು ಈ ರೀತಿಯಲ್ಲಿ ಒಟ್ಟು 349 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಪತ್ತೆಯಾಗಿದೆ. ಇದರ ಮೌಲ್ಯ ₹20.42 ಲಕ್ಷ ಎಂದು ಅಂದಾಜಿಸಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಲಾಗಿದೆ’ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.