ನ್ಯೂಸ್ ನಾಟೌಟ್: ಕೊರಗಜ್ಜನ ಕವಿತೆಗಳಲ್ಲಿ ಸಮುದಾಯವನ್ನು ಉಲ್ಲೇಖಿಸುವ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಹರಿಯ ಬಿಡಲಾಗುತ್ತಿದೆ. ಇದರ ವಿರುದ್ಧ ಎಸ್ಸಿ/ಎಸ್ಟಿ (SC/ST) ಮುಖಂಡರು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಈ ವಿಷಯವನ್ನು ಚರ್ಚಿಸಲಾಯಿತು. ದಲಿತ ಮುಖಂಡೆ ಅಮಲಾಜ್ಯೋತಿ ಮಾತನಾಡಿ, ಕರಾವಳಿ ಜಿಲ್ಲೆಗಳ ಜನರು ಪೂಜ್ಯನೀಯವಾಗಿರುವ ಕೊರಗಜ್ಜನನ್ನು ಉಲ್ಲೇಖಿಸುವಾಗ ಆಕ್ಷೇಪಾರ್ಹ ಪದಗಳನ್ನು ಬಳಸಲಾಗುತ್ತಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಸಮಸ್ಯೆಯನ್ನು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರ ಗಮನಕ್ಕೆ ತರಲಾಗಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಎಸ್ಸಿ/ಎಸ್ಟಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ದಸರಾ ವೇಶವನ್ನು ಕ್ರಮಬದ್ಧಗೊಳಿಸುವ ಬಗ್ಗೆಯೂ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ದಸರಾ ವೇಷದ ಅಂಗವಾಗಿ ವಿವಿಧ ವೇಷಗಳನ್ನು ಧರಿಸಲು ಮಾಡಲು ಪೊಲೀಸರ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಏಕೆಂದರೆ, ಈ ವೇಷಧಾರಿಗಳು ಮನೆ ಮನೆಗೆ ಹಣ ಕೇಳಲು ಹೋಗುತ್ತಾರೆ. ಈ ಸಂದರ್ಭದ ಲಾಭ ಪಡೆಯುವ ಕೆಲವು ದುಷ್ಕರ್ಮಿಗಳು ವೇಷಗಳನ್ನು ಧರಿಸಿ ಮನೆಗಳನ್ನು ದೋಚುತ್ತಾರೆ. ಹೀಗಾಗಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಎಂದು ದಲಿತ ಮುಖಂಡರು ಹೇಳಿದ್ದಾರೆ.