ನ್ಯೂಸ್ ನಾಟೌಟ್: ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿಯವರು ಮಲೆಕುಡಿಯ ದಂಪತಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಅನ್ನುವ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದು ಇದನ್ನು ಕಟು ಪದಗಳಿಂದ ಕೊಡಗು ಸಂಪಾಜೆ ಗ್ರಾಮಸ್ಥರು ಮತ್ತು ಗ್ರಾ.ಪಂ. ಸದಸ್ಯರು ಖಂಡಿಸಿದ್ದಾರೆ.
ಮಂಗಳವಾರ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಗ್ರಾಮಸ್ಥರಾದ ಯಶೋಧರ ಬಿ.ಜೆ.ಯವರು ಮಾತನಾಡಿ, “ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷರಾಗಿದ್ದ ದಿ.ಕಳಗಿ ಬಾಲಚಂದ್ರರ ಪತ್ನಿ ರಮಾದೇವಿ ಕಳಗಿಯವರು ಎರಡೂವರೆ ತಿಂಗಳ ಹಿಂದೆ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗ್ರಾಮದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪಣತೊಟ್ಟು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಸ್ಯೆಗಳಿದ್ದ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸುತ್ತಾರೆ. ಹೀಗೆ ಜನಪರ ಕೆಲಸ ಮಾಡುವುದನ್ನು ಸಹಿಸಲಾಗದ ಕೆಲವು ಕಿಡಿಗೇಡಿಗಳು ಅವರ ವಿರುದ್ಧ ವೆಬ್ ಸೈಟ್ ಒಂದರಲ್ಲಿ ಕಪೋಲಕಲ್ಪಿತ ವರದಿಗಳನ್ನು ಬರೆಯಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತಿದ್ದಾರೆ. ಆ ವರದಿಯಲ್ಲಿ ಇರುವುದು ಸತ್ಯಕ್ಕೆ ದೂರವಾದ ಮಾತು, ಇದನ್ನು ಗ್ರಾಮಸ್ಥರಾಗಿ ನಾವು ಖಂಡಿಸುತ್ತೇವೆ ಎಂದು ತಿಳಿಸಿದರು. ಈ ಬಗ್ಗೆ ಮಾತನಾಡಿದ ಗ್ರಾಮದ ಹಿರಿಯ ಓ.ಆರ್. ಮಾಯಿಲಪ್ಪ, ರಮಾದೇವಿಯವರ ಬಗ್ಗೆ ನಮಗೆ ಗೊತ್ತಿದೆ. ಸಮಸ್ಯೆಗಳಿದ್ದರೆ ಮಾತನಾಡಿ ಪರಿಹರಿಸಿಕೊಳ್ಳಬೇಕು ಹೊರತು ಅಪಪ್ರಚಾರ ಸರಿಯಲ್ಲ ಎಂದು ಹೇಳಿದರು.
ಗ್ರಾ.ಪಂ. ಸದಸ್ಯೆ ಅನಿತಾ ಚಂದ್ರಶೇಖರ ಮಾತನಾಡಿ, “ಪಂಚಾಯತ್ ನ ಸಾಮಾಜಿಕ ನ್ಯಾಯಸಮಿತಿಯ ಅಧ್ಯಕ್ಷೆಯಾದ ನನ್ನ ಅಧ್ಯಕ್ಷತೆಯಲ್ಲಿ ಆ ದಿನ ಸಭೆ ನಡೆದಿದ್ದು, ಅಲ್ಲಿ ಯಾರೂ ಕೂಡಾ ಕೆಟ್ಟ ಶಬ್ದಗಳನ್ನು ಬಳಸಿ ಮಾತನಾಡಿಲ್ಲ. ಹೀಗಿದ್ದರೂ ಈ ರೀತಿಯ ಬರಹ ಬೇಸರ ತರಿಸಿದೆ ಎಂದು ಹೇಳಿದರು. ಪಂಚಾಯತ್ ಸದಸ್ಯ ನವೀನ್ ಕುಮಾರ್ ಬಿ.ಎಂ. ಮಾತನಾಡಿ, “ಪಂಚಾಯತ್ ಗೆ ಬಂದ ಬೇಡಿಕೆ ಕುರಿತು ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಇಡಲಾಗಿದೆ. ಆ ದಿನ ನಡೆದ ಸಭೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಪಡಲಾಗಿದೆ, ವೆಬ್ ಸೈಟ್ ನಲ್ಲಿ ವರದಿ ಬರೆದವರು ಪಂಚಾಯತ್ ನವರನ್ನು ಯಾಕೆ ವಿಚಾರಿಸಿಲ್ಲ. ನಾವು ಕಾನೂನು ರೀತಿ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು. ಉದಯ ಹನಿಯಡ್ಕ, ಕೊರಗಪ್ಪ ಅರಮನೆತೋಟ, ಪೂರ್ಣಿಮಾ ಅರೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.