ನ್ಯೂಸ್ ನಾಟೌಟ್ : ಸಿಲಿಂಡರ್ ಸ್ಫೋಟಗೊಂಡು ದಂಪತಿ ಗಾಯಗೊಂಡಿದ್ದ ಘಟನೆಯೊಂದು ಕೊಡಗಿನ ಕುಶಾಲನಗರದಿಂದ ವರದಿಯಾಗಿತ್ತು. ಈ ದುರಂತದಲ್ಲಿ ಆಶ್ರಮ ಆರಂಭಿಸಿ, 36 ವೃದ್ಧರಿಗೆ ಆಶ್ರಯ ನೀಡಿದ್ದ ಆಶ್ರಯದಾತ ದುರಂತ ಅಂತ್ಯವನ್ನೇ ಕಂಡಿದ್ದರು.
ಆದರೆ ಮನೆ ಮಗನನ್ನು ಕಳೆದು ಕೊಂಡ 36 ವೃದ್ಧರು ಇದೀಗ ಅನಾಥರಾಗಿದ್ದಾರೆ.ನಮ್ಮನ್ನು ಸಾಕಿ ಸಲಹಿದ ಮಗ ಇನ್ನಿಲ್ಲವಲ್ಲ ಎನ್ನುವ ನೋವಿಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.ನಮಗಿನ್ನಾರು ದಿಕ್ಕು,ನಾವು ಇನ್ನೊಮ್ಮೆ ಅನಾಥರಾದೆವು ಎನ್ನುವ ಕೂಗು ಕಲ್ಲು ಹೃದಯವನ್ನು ಕೂಡ ಕರಗಿಸುವಂತೆ ಮಾಡುತ್ತಿದೆ.
ತೊಂಡೂರಿನಲ್ಲಿರುವ ‘ಜೀವನದಾರಿ’ ಆಶ್ರಮದ ಸ್ಥಾಪಕ ರಮೇಶ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆದರೆ ಅವರನ್ನೇ ನಂಬಿಕೊಂಡಿದ್ದ ವೃದ್ಧರು ಇವರ ಮೃತ ದೇಹವನ್ನು ವೀಕ್ಷಿಸುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತರು.ನಮಗೆ ನಿತ್ಯವೂ ಊಟ ಕೊಟ್ಟು ನಮ್ಮ ಹೊಟ್ಟೆಗೆ ಅನ್ನ ನೀಡುತ್ತಿದ್ದ ದೇವರು ಇವರು , ಇವರನ್ನು ಇಷ್ಟು ಬೇಗ ಭಗವಂತ ಯಾಕೆ ಕರೆದುಕೊಂಡು ಹೋದ ಎನ್ನುತ್ತಾ ಅಳುತ್ತಾ ಹೊರಳಾಡಿದರು.
ನಿರ್ಗತಿಕ ವೃದ್ಧರನ್ನು, ಅಂಗವಿಕಲರನ್ನು, ಅಂಧರನ್ನು ಗುರುತಿಸಿ ರಮೇಶ್ ಅವರು ಅವರಿಗಾಗಿಯೇ ಸುಮಾರು 8 ವರ್ಷದ ಹಿಂದೆ ಮಡಿಕೇರಿಯಲ್ಲಿ ಸಣ್ಣದಾಗಿ ಆಶ್ರಮವೊಂದನ್ನು ಆರಂಭಿಸಿದರು. ಬಳಿಕ ಅದರ ಬಗ್ಗೆ ಹಲವು ಕನಸುಗಳನ್ನು ಕಂಡರು.ಹೀಗೆ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ 3 ವರ್ಷಗಳ ಬಾಡಿಗೆ ಮನೆಯಲ್ಲಿ ಆಶ್ರಮ ನಡೆಸಿ ಕೊಂಡು ಮುನ್ನಡೆಸಿದ್ದರು.
ಹೀಗೆ ಹೇಗೋ ಹಠ ಸಾಧಿಸುವ ಮೂಲಕ ಅದನ್ನು ಮುಂದುವರಿಸಿಕೊಂಡು ಬಂದಿದ್ದು,ಕಳೆದ ವರ್ಷವಷ್ಟೇ ಏಳನೇ ಹೊಸಕೋಟೆಯ ತೊಂಡೂರು ತೋಟದ ಮಧ್ಯೆಯೂ ಒಂದು ಸಣ್ಣ ಪ್ಲಾಸ್ಟಿಕ್ ಹೊದಿಕೆಯ ಸೂರನ್ನು ನಿರ್ಮಿಸಿ ಅನಾಥರಿಗೆ ನೆರವಾಗಿದ್ದರು.ಇಂತಹ ಮಗನನ್ನು ಕಳೆದು ಕೊಂಡು ವೃದ್ದರು ಇನ್ನು ಹೇಗಿರಲಿ ಎಂದು ಕಣ್ಣೀರಾದರು.ಈ ದೃಶ್ಯ ಮನಕಲಕುವಂತಿತ್ತು.
ಬೆಂಕಿ ಅವಘಡದಲ್ಲಿ ರಮೇಶ್ ಅವರ ಪತ್ನಿ ರೂಪಾ (36) ಹಾಗೂ ತಂದೆ ಕರಿಯಪ್ಪ (82) ಸಹ ತೀವ್ರವಾಗಿ ಗಾಯಗೊಂಡಿದ್ದರು.ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನು ರಮೇಶ್ ಅವರಿಗೆ ಅಮೃತಾ, ಸಿಂಚನಾ, ಐಶ್ವರ್ಯ ಮೂವರು ಮಕ್ಕಳಿದ್ದಾರೆ.