ನ್ಯೂಸ್ ನಾಟೌಟ್: ಭಾನುವಾರ ಕೇರಳದ ಚರ್ಚ್ ಕನ್ವೆನ್ಶನ್ ಸೆಂಟರ್ನಲ್ಲಿ ಸಂಭವಿಸಿದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟುಹಾಕುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಸಚಿವರ ವಿರುದ್ಧ ದೂರು ದಾಖಲಾಗಿದೆ. ಸೈಬರ್ ಸೆಲ್ ಎಸ್ಐ ದೂರಿನ ಆಧಾರದ ಮೇಲೆ ಚಂದ್ರಶೇಖರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ದೂರು ದಾಖಲಾಗಿದೆ.
ಭ್ರಷ್ಟಾಚಾರದ ಆರೋಪದಿಂದ ಅಪಖ್ಯಾತಿ ಪಡೆದ ಸಿಎಂ ಪಿಣರಾಯಿ ವಿಜಯನ್ ಅವರದ್ದು ಕೊಳಕು ನಾಚಿಕೆಯಿಲ್ಲದ ರಾಜಕಾರಣ. ದೆಹಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುವ ಹೊತ್ತಿಗೆ ಕೇರಳದಲ್ಲಿ ಹಮಾಸ್ ಉಗ್ರರು ಜಿಹಾದ್ಗೆ ಕರೆ ನೀಡುತ್ತಿದ್ದು, ಇದರ ಪರಿಣಾಮ ಮುಗ್ದ ಕ್ರೈಸ್ತರ ಮೇಲೆ ದಾಳಿ ಹಾಗೂ ಬಾಂಬ್ ಸ್ಪೋಟಗಳಾಗುತ್ತಿವೆ. ವಿಜಯನ್ ಓರ್ವ ಸುಳ್ಳುಗಾರ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಇದರ ಬೆನ್ನಲ್ಲೇ, ಸಿಎಂ ಮತ್ತು ಚಂದ್ರಶೇಖರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಚಂದ್ರಶೇಖರ್ ಅವರನ್ನು ‘ಅತ್ಯಂತ ವಿಷಕಾರಿ’ ಎಂದು ವಿಜಯನ್ ಟೀಕಿಸಿದ್ದರು. ಇದೀಗ ಐಪಿಸಿಯ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಅಥವಾ ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 120 (ಒ) (ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆ ಮತ್ತು ಉಲ್ಲಂಘನೆ ಉಂಟುಮಾಡುವುದು) ಅಡಿಯಲ್ಲಿ ಸಚಿವರ ವಿರುದ್ಧ ಕೇರಳ ಪೊಲೀಸ್ ಕಾಯ್ದೆಯಡಿ ದಾಖಲಾಗಿದೆ.