ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.ಕಳೆದ ಅನೇಕ ಸಮಯಗಳಿಂದ ಅಲ್ಲಿನ ರೈತರು ಭಾರಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ಪ್ರತಿ ದಿನ ರಸ್ತೆ ಮೂಲಕ ನಡೆದು ಕೊಂಡು ಹೋಗುವ ಶಾಲಾ ಮಕ್ಕಳು ಕೂಡ ಆತಂಕದಲ್ಲೇ ಹೋಗಬೇಕಾದ ಅನಿವಾರ್ಯತೆ.ಕೆಲ ಸಮಯಗಳ ಹಿಂದೆ ಒಂದೇ ಮನೆಯ ವ್ಯಕ್ತಿಗಳಿಬ್ಬರ ಮೇಲೆಯೂ ಹುಲಿ ಆಕ್ರಮಣ ಮಾಡಿತ್ತು.ಕಾಡಾನೆ,ಚಿರತೆ ಎಂದು ಭಯದ ವಾತಾವರಣದಲ್ಲಿರುವ ಈ ಹೊತ್ತಲ್ಲೇ ಮತ್ತೆ ಹುಲಿ ಹೆಜ್ಜೆಯೊಂದು ಕಂಡು ಬಂದಿದ್ದು, ಭಯದ ನೆರಳು ಇಮ್ಮಡಿಯಾಗಿದೆ.ಇಲ್ಲಿನ ಜನರ ಸಂಕಷ್ಟ ದುಪ್ಪಟ್ಟಾಗಿದೆ.
ಹೌದು,ಮಡಿಕೇರಿಯ ಮಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು,ಈ ಬಗ್ಗೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಹೆಜ್ಜೆ ಗುರುತು ಪತ್ತೆಯಾಗಿ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಕೂಡ ನಡೆಸಿತ್ತು.
ಇದೀಗ ಮತ್ತೆ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಹುಲಿಯ ಚಲನವಲನ ಪತ್ತೆ ಹಚ್ಚಲು ಕ್ಯಾಮರಾ ಅಳವಡಿಸಲಾಗಿದೆ.
ಹುಲಿಯನ್ನು ಸೆರೆ ಹಿಡಿಯಿರಿ, ಇಲ್ಲವೇ ನೀವು ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ.ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಈ ಸಮಸ್ಯೆಯಿಂದ ಜನರಿಗೆ ಮುಕ್ತಿ ನೀಡಿ ಎಂದು ರೈತ ಸಂಘ ಎಚ್ಚರಿಕೆಯನ್ನು ಕೂಡ ನೀಡಿದೆ.