ನ್ಯೂಸ್ ನಾಟೌಟ್ : ಶಿವಮೊಗ್ಗದಲ್ಲಿ ಗಲಭೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ರಾಜಕೀಯ ನಾಯಕರು ಈ ಗಲಭೆ ಕುರಿತಂತೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದು,ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಎರಡು ಧರ್ಮಗಳ ನಡುವೆ ನಡೆದಿರುವ ಕೋಮು ಗಲಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ.
ಮೈಸೂರಿನ ಚಾಮರಾಜನಗರದಲ್ಲಿ ಮಾಧ್ಯಮದವರೊದಿಗೆ ಮಾತನಾಡಿದ ಅವರು “ಈದ್ ಮಿಲಾದ್ ಮೆರವಣಿಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಮೆರವಣಿಗೆ ವೇಳೆ ಔರಂಗಜೇಬನ ಖಡ್ಗ ಮೆರವಣಿಗೆ ಮಾಡಿದ್ದು, ಆ ಖಡ್ಗದ ತುದಿಗೆ ರಕ್ತದ ಬಣ್ಣ ಹಾಕಿದ್ದಾರೆ. ಮಾತ್ರವಲ್ಲದೇ ಹಿಂದೂಗಳ ರಕ್ತ ಬೀಳುತ್ತದೆ ಎಂದು ಉರ್ದುವಿನಲ್ಲಿ ಬರೆದಿದ್ದು ಮುಸಲ್ಮಾನ ಸಮಾಜದ ಮಾನಸಿಕತೆ ಏನು? ಅವರು ಏನು ಮಾಡಲು ಹೊರಟಿದ್ದಾರೆ? ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಶಿವಮೊಗ್ಗದ ಎಲ್ಲಾ ಮುಸಲ್ಮಾನರ ಕೈಯಲ್ಲಿ ಕಲ್ಲು , ತಲವಾರುಗಳಿದ್ದವು. ಅದನ್ನೆಲ್ಲ ಯಾಕೆ ಪೊಲೀಸರು ಗಮನಿಸಲಿಲ್ಲ. ಪೊಲೀಸರ ಕೈ ಕಟ್ಟಿಹಾಕಿದ್ದಾರೆ. ಕೇವಲ ಮುಸಲ್ಮಾನ ಸಮಾಜದಿಂದ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದಾ? 136 ಸೀಟ್ ಬಂದಿರುವುದು ಕೇವಲ ಒಂದು ಸಮುಯದಾಯದಿಂದಲಾ ಎಂದು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ ಕರಂದ್ಲಾಜೆ ,ಮುಸಲ್ಮಾನರ ಆದರ್ಶ ಪುರುಷ ‘ಅಬ್ದುಲ್ ಕಲಾಂ’ ಆಗಬೇಕಿತ್ತು, ಆದರೆ ಟಿಪ್ಪು ಸುಲ್ತಾನ್ , ಔರಂಗಜೇಬ್ ಆಗಿದ್ದಾರೆ. ಖಡ್ಗ ಪ್ರದರ್ಶನ ಮಾಡುವ ಮೂಲಕ ಸರ್ಕಾರ ಮತ್ತು ಹಿಂದೂಗಳನ್ನು ಹೆದರಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ ಅವರು ಇಡೀ ಶಿವಮೊಗ್ಗವನ್ನು ಹಸಿರುಕರಣ ಮಾಡಿದ್ದಾರೆ ಎಂದು ಗುಡುಗಿದರು.
ಹಾಗಾದರೆ ನಮಗೆ ರಕ್ಷಣೆ ನೀಡುವುದು ಯಾರು..? ನಾವು ಭಯದ ನೆರಳಲ್ಲಿ ಬದುಕಬೇಕಾ? ಮನೆ ಮೇಲೆ ಕಲ್ಲು ತೂರಾಟ ಆಗಿದೆ, ಯಾಕೆ ಮುಸ್ಲಿಂ ಸಮಾಜ ಓಲೈಸುವ ಕೆಲಸ ಮಾಡುತ್ತಿದ್ದೀರಿ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾದ ಶೋಭಾ ಕರಂದ್ಲಾಜೆಯವರು,ಮಡಿಕೇರಿಯ ಕುಟ್ಟಪ್ಪನ ದುರಂತ ಅಂತ್ಯದಿಂದ ಶುರುವಾದ ಕೃತ್ಯಗಳು ಇನ್ನೂ ನಿಂತಿಲ್ಲ, ಹಾಗಾದರೆ ಶಿವಮೊಗ್ಗ ಗಲಾಟೆ ಬಗ್ಗೆ ಇಲ್ಲಿಯವರೆಗೆ ಏನು ಕ್ರಮ ಕೈಗೊಂಡಿದ್ದೀರಿ? ಮುಂದೆ ಯಾವ ಕ್ರಮ ಕೈಗೊಳ್ಳುತ್ತಿರಿ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಗೃಹ ಸಚಿವ ಜಿ. ಪರಮೇಶ್ವರ್ ಅವರು ಇದೊಂದು ಸಣ್ಣ ಘಟನೆ ಎಂಬ ಹೇಳಿಕೆ ನೀಡಿದ್ದು, ಅವರನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ.ನಿಮ್ಮ ಮನೆ ಮುಂದೆ ಈ ರೀತಿ ಘಟನೆಗಳಾದ್ರೆ ನೀವು ಸುಮ್ನಿರುತ್ತಿದ್ರಾ? ಬೇಜವಾಬ್ದಾರಿಯ ಸರ್ಕಾರದಿಂದ ಹಿಂದೂಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸಿದ್ದರಾಮಯ್ಯನವರೇ ಇದಕ್ಕೆ ಉತ್ತರ ಹೇಳಬೇಕು, ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೆಂದರೆ ಸಿದ್ದರಾಮಯ್ಯ ಅವರನ್ನ ಸುಮ್ಮನೆ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.
ಮಡಿಕೇರಿಯಲ್ಲಿ ಕುಟ್ಟಪ್ಪನ ಹ * ತ್ಯೆ ಆದಾಗ ಅಲ್ಲಿ ಕೇವಲ ಮಡಿಕೇರಿ ಜನ ಇರಲಿಲ್ಲ. ಕೇರಳ, ಶಿವಮೊಗ್ಗ, ಮಂಗಳೂರು, ಭಟ್ಕಳದಿಂದ ಬಂದಿದ್ದರು. ಈಗಲೂ ಅದೇ ರೀತಿ ಆಗಿದೆ. ವಾಹನದಲ್ಲಿ ಹೊರಗಡೆಯಿಂದ ಜನರು ಬರುತ್ತಿದ್ದಾರೆ ಪೊಲೀಸರು ಏನು ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಸರ್ಕಾರ ಹೇಳಬೇಕಿದೆ ಎಂದು ಶಿವಮೊಗ್ಗ ಗಲಭೆ ವಿರುದ್ಧ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ಸಚಿವರು ಸರಿಯಾಗಿ ಚಾಟಿ ಬೀಸಿದರು.