ನ್ಯೂಸ್ ನಾಟೌಟ್ :ಶಕ್ತಿ ಯೋಜನೆ ಬಂದಾಗಿನಿಂದ ಕೆಲವು ಕಡೆ ಸಮಸ್ಯೆಗಳು ಇನ್ನೂ ಮುಗಿದಿಲ್ಲ.ಬಹುಮುಖ್ಯವಾಗಿ ಮಹಿಳೆಯರ ಪಾಲಿಗೆ ಇದು ವರದಾನವಾದರೂ ಕೂಡ ಕೆಎಸ್ಸಾರ್ಟಿಸಿ ಬಸ್ ಬೆಳಗ್ಗಿನ ವೇಳೆಯಲ್ಲಿ ತುಂಬಿ ತುಳುಕಾಡುತ್ತಿರುವ ಘಟನೆಗಳ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಲೇ ಇದೆ.ಬಸ್ಗಳಲ್ಲಿ ಲಿಮಿಟ್ ಮೀರಿ ಪ್ರಯಾಣಿಕರು ಇರೋದ್ರಿಂದ ಬಸ್ ಪ್ರಯಾಣಕ್ಕೂ ಅಡಚಣೆಯಾಗುತ್ತಿದೆ.ಇದೀಗ ಇಂತಹದ್ದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಿಂದ ವರದಿಯಾಗಿದೆ.
ಬೆಳಗ್ಗಿನ ವೇಳೆ ಶಾಲಾ-ಕಾಲೇಜ್ಗೆ ಹೋಗುವ ವಿದ್ಯಾರ್ಥಿಗಳು,ಕೂಲಿ ಕೆಲಸ -ಆಫೀಸ್ ಕೆಲಸಕ್ಕೆ ಹೋಗುವ ಮಹಿಳೆಯರು ಸೇರಿದಂತೆ ಪುರುಷರು ಕೂಡ ಹೆಚ್ಚಾಗಿ ಕೆಎಸ್ಸಾರ್ಟಿಸಿ ಬಸ್ನಲ್ಲೇ ಸಂಚರಿಸುತ್ತಿದ್ದಾರೆ.ಇದರಿಂದಾಗಿ ಒಂದೇ ಟೈಮಿಂಗ್ಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಬಸ್ಸೊಂದು ಓವರ್ ಲೋಡ್ ಆದ ಹಿನ್ನಲೆಯಲ್ಲಿ ಬಸ್ಸನ್ನು ಚಾಲಕ ಮುಂದಕ್ಕೆ ಚಲಾಯಿಸಲು ಒಪ್ಪದ ಪ್ರಸಂಗವೊಂದು ನಡೆದಿದೆ.
ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಹೋಗುವ ಬೆಳಗ್ಗಿನ ಪ್ರಥಮ ಬಸ್ (ಕೆಎಸ್ಸಾರ್ಟಿಸಿ) ಓವರ್ ಲೋಡ್ ಆದ ಹಿನ್ನೆಲೆಯಲ್ಲಿ ಬಸ್ ಚಾಲಕ ಒಪ್ಪಲಿಲ್ಲ.ಈ ಕಾರಣದಿಂದ ಬಸ್ ಸುಮಾರು ಅರ್ಧಗಂಟೆ ಶಾಂತಿಮುಗೇರುವಿಗೆ ಆಲಂಕಾರಿನಲ್ಲಿ ಕವಲೊಡೆಯುವ ಮಾರ್ಗದಲ್ಲಿ ಬಾಕಿಯಾದ ವಿದ್ಯಮಾನ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ಬಸ್ ಆಲಂಕಾರು ತಲುಪುವಾಗ ಸಾಮರ್ಥ್ಯಕ್ಕಿಂತ ಅಧಿಕ ಅಂದರೆ 130ಕ್ಕೂ ಹೆಚ್ಚು ಜನ ಪ್ರಯಾಣಿಕರು ಸಂಚರಿಸುತ್ತಿದ್ದರು.ಆಗ ಚಾಲಕ ಬಸ್ಸಿನಿಂದ ಅರ್ಧ ಜನ ಇಳಿಯಬೇಕು ಇಲ್ಲದಿದ್ದರೆ ಬಸ್ಸನ್ನು ಮುಂದಕ್ಕೆ ಚಲಾಯಿ ಸುವುದಿಲ್ಲ ಎನ್ನುವ ಷರತ್ತು ಹಾಕಿದ್ದರು.ಯಾಕೆಂದರೆ ಕಳೆದ ವಾರ ಕುದ್ಮಾರಿನಲ್ಲಿ ಈ ಚಾಲಕನೇ ಚಲಾಯಿಸುತ್ತಿದ್ದ ಇದೇ ಸಮಯದ ಬಸ್ಸಿನ ಹಿಂಬದಿಯ ಚಕ್ರ ಒಡೆದು ಹೋಗಿ ಮುಂದೆ ಚಲಿಸದಂತಾಗಿತ್ತು.ಈ ಭಯದಿಂದ ಬಸ್ ಚಾಲಕ ಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಬೇಕಾಯಿತು.
ಈ ವೇಳೆ ಪ್ರಯಾಣಿಕರೋರ್ವರು ಪುತ್ತೂರು ಘಟಕಕ್ಕೆ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ವಿನಂತಿಸಿದರು. ಅಧಿಕಾರಿ ಸೂಚನೆ ಮೇರೆಗೆ ಬಸ್ ಹೊರಟಿತು ಎಂದು ತಿಳಿದು ಬಂದಿದೆ.