ನ್ಯೂಸ್ ನಾಟೌಟ್ : ಉಡುಪಿಗೆ ಹೋಗಿ ಬರುತ್ತೇನೆ ಮನೆಯಲ್ಲಿ ಹೇಳಿ ಹೋದ ಯುವತಿಯೋರ್ವಳು ವಾಪಾಸ್ ಮನೆಗೆ ಹಿಂತಿರುಗದೇ ನಾಪತ್ತೆಯಾಗಿರುವುದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆದರೀಗ ಯುವತಿ ಶವ ಪತ್ತೆಯಾಗಿದೆ.
ಉಡುಪಿಯ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಸೇತುವೆಯ ಬಳಿ ಪಾಪನಾಶಿನಿ ನದಿಯ ಗುಂಡಿಯಲ್ಲಿ ಆ.13ರ ಶುಕ್ರವಾರ ಈಕೆ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ಸದಾಶಿವ ಪೂಜಾರಿ ಅವರ ಪುತ್ರಿ ವಿನಿತಾ (22) ಅ.9ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಮನೆಯಿಂದ ಹೋಗಿದ್ದಳು.ಈಕೆ ಬಿ.ಕಾಂ. ಪದವೀಧರೆಯಾಗಿದ್ದು,ಉಡುಪಿ ಎಂಜಿಎಂ ಕಾಲೇಜ್ ಬಳಿಯ ಎಲೆಕ್ಟ್ರಿಕಲ್ ಬೈಕ್ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ. ಬಳಿಕ ಕಳೆದ ವಾರದ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದರು ಎಂದು ತಿಳಿದು ಬಂದಿದೆ.
ಇದಾದ ಬಳಿಕ ಎರಡು ದಿನಗಳ ನಂತರ ಉಡುಪಿಗೆ ಹೋಗಿ ಬರುತ್ತೇನೆ ಎಂದು ಹೋದವರು ನಾಪತ್ತೆಯಾಗಿದ್ದರು.ಇವರು ಮಾನಸಿಕವಾಗಿ ನೊಂದಿದ್ದರೆಂದು ಹೇಳಲಾಗಿದ್ದು, ಸೇತುವೆಯಿಂದ ಹಾರಿ ಬದುಕು ಕತ್ತಲು ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ ಹಾಗೂ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಶಿರ್ವ ಪೊಲೀಸ್ ಠಾಣಾಧಿಕಾರಿ ಸಕ್ತಿವೇಲು ಮತ್ತು ಕ್ರೈಂ ವಿಭಾಗದ ಪಿಎಸ್ಐ ಅನಿಲ್ ಕುಮಾರ್ ಸ್ಥಳದಲ್ಲಿದ್ದು ತನಿಖೆ ಮುಂದುವರಿಸಿದ್ದಾರೆ.ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಕೊಳೆತ ಶವವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಶವ ಪರೀಕ್ಷೆ ನಡೆಸಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ.