ನ್ಯೂಸ್ ನಾಟೌಟ್ :ನೀವು ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ..! ಮಡಿಕೇರಿ ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ವೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 26 ಕೊನೆ ದಿನ.
ಮಡಿಕೇರಿ ಪ್ರಾದೇಶಿಕ ವಿಭಾಗದಲ್ಲಿ 5, ವಿರಾಜಪೇಟೆ ಪ್ರಾದೇಶಿ ವಿಭಾಗದಲ್ಲಿ 5 , ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ 6 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಅಭ್ಯರ್ಥಿಗಳು ಆಯಾ ಹುದ್ದೆಗೆ ನಿಗದಿಪಡಿಸಿದ ವೃತ್ತಿ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಬೇಕಾಗುತ್ತದೆ. ಅರಣ್ಯ ವೀಕ್ಷಕ ಹುದ್ದೆಗೆ ವೃತ್ತಿ ಬುನಾದಿ ತರಬೇತಿ ಅವಧಿ 6 ತಿಂಗಳು. ಪರೀಕ್ಷಾರ್ಥ ಅವಧಿ (ತರಬೇತಿ ಸೇರಿ) 36 ತಿಂಗಳು ಆಗಿರುತ್ತದೆ ಎಂದು ನೇಮಕಾತಿ ಅಧಿಸೂಚನೆಯನ್ನು ತಿಳಿಸಲಾಗಿದೆ.
ನೇಮಕಗೊಂಡ ನಂತರ ಅಭ್ಯರ್ಥಿಯು ತರಬೇತಿಗೆ ಹಾಜರಾಗುವ ಮೊದಲು ನೇಮಕಾತಿ ಪ್ರಾಧಿಕಾರದ ಸಮಕ್ಷಮ ಇಲಾಖೆಯಲ್ಲಿ ನೇಮಕಾತಿಯಾದ ದಿನಾಂಕದಿಂದ ಕನಿಷ್ಠ 3 ವರ್ಷ ಸೇವೆಸಲ್ಲಿಸಬೇಕಾಗುತ್ತದೆ. ಒಂದು ವೇಳೆ ತಪ್ಪಿದಲ್ಲಿ ಸರ್ಕಾರವು ತರಬೇತಿಯ ಬಗ್ಗೆ ಭರಿಸಿದ ಸಂಪೂರ್ಣ ವೆಚ್ಚವನ್ನು ಶೇ.8ರ ದಂಡನೆ ಬಡ್ಡಿಯೊಂದಿಗೆ ಸರ್ಕಾರಕ್ಕೆ ಪಾವತಿ ಮಾಡಲು ಮತ್ತು ಆಯ್ಕೆ ಪ್ರಾಧಿಕಾರ ನಿಗದಿಪಡಿಸುವ ಇತರ ಷರತ್ತುಗಳನ್ನು ಪೂರೈಸಲು ಸಿದ್ಧವಿರುವುದಾಗಿ ಹಾಗೂ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ, ಅಲ್ಲದೆ ಸರ್ಕಾರವು ಸೂಚಿಸಿದ ಯಾವುದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧವಿರುವುದಾಗಿ (ರೂ. 100) ಛಾಪಾ ಕಾಗದದಲ್ಲಿ ಅಭ್ಯರ್ಥಿಯು ಕರಾರು ಪತ್ರವನ್ನು ಬರೆದುಕೊಡತಕ್ಕದ್ದು ಎಂಬ ನಿಭಂದನೆಗಳಿವೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಬಹುದು.ಅದಕ್ಕಿಂತಲೂ ಮೊದಲು ಅಧಿಸೂಚನೆಯಲ್ಲಿನ ಸೂಚನೆ/ ನಿರ್ದೇಶನ ಹಾಗೂ ಷರತ್ತುಗಳನ್ನು ಕೂಲಂಕಷವಾಗಿ ಅರ್ಥೈಸಿಕೊಂಡು ತಮಗೆ ಅನ್ವಯವಾಗುವ ವಿವರಗಳನ್ನು ನಿಗದಿತ ಅಂಕಣದಲ್ಲಿ ಭರ್ತಿ ಮಾಡಲು ಹೇಳಲಾಗಿದೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಆನ್ಲೈನ್ ಅರ್ಜಿಯ ಪ್ರತಿಯನ್ನು ಮುದ್ರಿಸಿ ಮಾಹಿತಿಗಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದೆ. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಹೊಂದಿರಬೇಕಾಗುತ್ತದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ 31/10/2023. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು, ಪವರ್ಗ 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳು 200 ರೂ. ಮತ್ತು 20 ರೂ. ಸೇವಾ ಶುಲ್ಕ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂ., ಸೇವಾ ಶುಲ್ಕ 20 ರೂ.ಗಳನ್ನು ಪಾವತಿಸಬೇಕು.
ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ಅಪೂರ್ಣ ಎಂದು ಪರಿಗಣಿಸಲಾಗುವುದು ಮತ್ತು ತಿರಸ್ಕರಿಸಲಾಗುತ್ತದೆ. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ, ಅದನ್ನು ಯಾವುದೇ ಸಂದರ್ಭದಲ್ಲಿ ಹಿಂತಿರುಗಿಸಲಾಗುವುದಿಲ್ಲ ಅಥವಾ ಅದನ್ನು ಅರಣ್ಯ ಇಲಾಖೆ ನಡೆಸುವ ಇತರೆ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ 18,600-32,600 ರೂ.ಗಳು ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮುಖಾಂತರವೇ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ನೇರವಾಗಿ/ ಕೊರಿಯರ್/ ನೋಂದಾಯಿತ ಅಂಚೆ/ ಸಾಧಾರಣ ಅಂಚೆ/ ಇ-ಮೇಲ್/ ಮುದ್ದಾಂ/ ಇತ್ಯಾದಿ ಯಾವುದೇ ಇತರ ವಿಧಾನಗಳ ಮುಖಾಂತರ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.