ನ್ಯೂಸ್ ನಾಟೌಟ್: ಬೀದಿ ನಾಯಿಗಳು ಕಚ್ಚಲು ಬಂದ್ರೆ ಬಿಸ್ಕೆಟ್ ಹಾಕಿ ಅದನ್ನು ಸಮಾಧಾನಪಡಿಸುವ ಅದೆಷ್ಟೋ ಮಂದಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು 65 ವರ್ಷದ ಇಸ್ರೇಲಿ ಅಜ್ಜಿ ಬಿಸ್ಕೆಟ್ ಬಳಸಿಕೊಂಡೇ ರೈಫಲ್ ಹಿಡಿದು ಬಂದ ಉಗ್ರರನ್ನು ಬೀದಿ ಶ್ವಾನಗಳಂತೆ ಅಟ್ಟಿ ಭಾರಿ ವೈರಲ್ ಆಗಿದ್ದಾಳೆ. ಈಕೆಯ ಸಾಹಸಮಯ ಕಥೆಗೆ ಇದೀಗ ವಿಶ್ವದೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅ.7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ತಮ್ಮ ಮನೆಯನ್ನು ಉಗ್ರರು ಹೊಕ್ಕಾಗ ಅವರನ್ನು ಈ ಅಜ್ಜಿ ಏಕಾಂಗಿಯಾಗಿ ಎದುರಿಸಿದಳು. ಆಕೆ ಎದುರಿಸಿದ್ದು ಗನ್ ನಿಂದ ಅಲ್ಲ, ಬದಲಾಗಿ ಬಿಸ್ಕೆಟ್ , ಕೋಕ್, ಜೋಕ್ ಗಳ ಮೂಲಕ!
ಈಕೆಯ ಧೀರೋದಾತ್ತ, ಸಮಯೋಚಿತ ವರ್ತನೆಗೆ ಸೂಕ್ತ ಮನ್ನಣೆಯೇ ದೊರೆತಿದೆ. ಇಸ್ರೇಲ್ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಆಕೆಯನ್ನು ಭೇಟಿ ಮಾಡಿದ್ದಾರೆ. ಇಸ್ರೆಲ್ ದೇಶವನ್ನು ಕಾಪಾಡಿದ ಹೀರೋಗಳಲ್ಲಿ ಒಬ್ಬಳು ಎಂದು ಗೌರವಿಸಿದ್ದಾರೆ. 65 ವರ್ಷದ ಇಸ್ರೇಲಿ ಮಹಿಳೆ ರಾಚೆಲ್ ಎಡ್ರಿಯ ಈ ಕತೆ ಸ್ವಾರಸ್ಯಕರವಾಗಿದೆ.
ಈಕೆಯ ಮನೆಗೆ ದಾಳಿ ಮಾಡಿದ್ದ ಹಮಾಸ್ ಉಗ್ರರು, ಎದ್ರಿಯನ್ನೂ ಈಕೆಯ ಗಂಡ ಡೇವಿಡ್ರನ್ನೂ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ರಾಚೆಲ್ ಮತ್ತು ಡೇವಿಡ್ ತಮ್ಮ ಬುದ್ಧಿವಂತಿಕೆ ಬಳಸಿಕೊಂಡು 20 ಗಂಟೆಗಳ ಕಾಲ ಹೇಗೆ ಬದುಕುಳಿದರು ಎಂಬುದನ್ನು ವಿವರಿಸಿದ್ದಾರೆ. ಆಕೆ ಉಗ್ರರಿಗೆ ಅಡುಗೆ ಮಾಡಿದ್ದಳು, ಕುಕೀಸ್ ಮಾಡಿಕೊಟ್ಟಿದ್ದಳು, ಕಾಫಿ ಸರ್ವ್ ಮಾಡಿದ್ದಳು.
ಧೃತಿಗೆಡದ ಆಕೆ ʼʼನಾನು ನಿಮಗೆ ಹೀಬ್ರೂ ಭಾಷೆ ಕಲಿಸ್ತೇನೆ, ನೀವು ನನಗೆ ಅರೇಬಿಕ್ ಕಲಿಸಿʼʼ ಎಂದು ಜೋಕ್ ಕೂಡ ಮಾಡಿದ್ದಳು! ‘ಇದು ಜೀವನ ಮತ್ತು ಸಾವಿನ ವಿಷಯ ಎಂದು ನಾನು ಅರ್ಥಮಾಡಿಕೊಂಡೆ. ಅವರು ಹಸಿದಿದ್ದರೆ ಕೋಪಗೊಳ್ಳುತ್ತಾರೆ ಎಂದು ನನಗೆ ತಿಳಿದಿತ್ತು. ಹೀಗಾಗಿ ಅವರ ಹಸಿವೆ ನೀಗಿಸಲು ಬಿಸ್ಕೆಟ್, ಕೋಕ್, ನೀರು ನೀಡಿದೆ. ನನಗೆ ಇನ್ಸುಲಿನ್ ಚುಚ್ಚುಮದ್ದು ನೀಡು ಎಂದು ಉಗ್ರನಿಗೆ ಹೇಳಿದೆ. ನನಗೆ ಪೊಲೀಸ್ ಅಧಿಕಾರಿ ಮಗನಿದ್ದಾನೆ ಎಂಬುದನ್ನು ಅವರ ಗಮನದಿಂದ ತಪ್ಪಿಸಿದೆʼ ಎಂದಿದ್ದಾಳೆ ಎದ್ರಿ. ನಂತರ ಎದ್ರಿಯ ಮಗನೂ ಇದ್ದ SWAT ತಂಡ ಅಲ್ಲಿಗೆ ಬಂದು ಉಗ್ರರನ್ನು ಕೊಂದು ಅವರನ್ನು ರಕ್ಷಿಸಿತು. ಇದೀಗ ರಾಚೆಲ್ ಎದ್ರಿ ನ್ಯಾಷನಲ್ ಹೀರೋ ಎನಿಸಿಕೊಂಡಿದ್ದಾಳೆ.