ನ್ಯೂಸ್ ನಾಟೌಟ್: ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಬಹರೈನ್ನಲ್ಲಿ ವೈದ್ಯರಾಗಿರುವ ಕನ್ನಡಿಗ, ಮಂಗಳೂರು ಮೂಲದ ಡಾ ಸುನಿಲ್ ರಾವ್ ನನ್ನು ಬಹರೈನ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸುನೀಲ್ ರಾವ್ ಹಮಾಸ್ ಉಗ್ರರ ಕೃತ್ಯ ಖಂಡಿಸಿ, ಇಸ್ರೇಲ್ ಪರವಾಗಿ ಟ್ವೀಟ್ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವರು ಈ ಪೋಸ್ಟನ್ನು ಬಹರೈನ್ ಆಡಳಿತಕ್ಕೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ವೈದ್ಯರನ್ನು ಬಂಧಿಸಲು ಆದೇಶಿಸಿದೆ.
ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿಎಂಡಿ ಮಾಡಿದ್ದ ಡಾ ಸುನಿಲ್ ಜೆ ರಾವ್ ಬಹರೈನ್ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ವೈದ್ಯರಾಗಿ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಬಹರೈನ್ ಪೊಲೀಸರು ಬಂಧಿಸುತ್ತಿದ್ದಂತೆ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯರನ್ನು ಹುದ್ದೆಯಿಂದ ತೆಗೆದು ಹಾಕಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಆಸ್ಪತ್ರೆ, ನಮ್ಮ ಇಂಟರ್ನಲ್ ಮೆಡಿಸಿನ್ ವಿಭಾದಲ್ಲಿ ತಜ್ಞವೈದ್ಯರಾಗಿರುವ ಡಾ ಸುನಿಲ್ ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಮಾಜದ ಸ್ವಾಸ್ಥ್ರ್ಯಕ್ಕೆ ಧಕ್ಕೆ ತರಬಲ್ಲ ಟ್ವೀಟ್ ಗಳನ್ನು ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅವರು ಮಾಡಿರುವ ಟ್ವೀಟ್ ಅವರ ಸಿದ್ಧಾಂತ ಅವರ ವೈಯಕ್ತಿಕವಾಗಿದ್ದು ಅದು ಆಸ್ಪತ್ರೆಯ ಅಭಿಪ್ರಾಯ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ. ಇದು ನಮ್ಮ ಆಸ್ಪತ್ರೆಯ ನೀತಿ ಸಂಹಿತೆಗೆ ವಿರುದ್ಧವಾಗಿದ್ದು ಅವರ ವಿರುದ್ಧ ನಾವು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.
ತಾವು ಇಸ್ರೇಲ್ ಪರ ಮಾಡಿದ್ದ ಪೋಸ್ಟ್ ವಿವಾದಕ್ಕೀಡಾಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದ ಡಾ ಸುನಿಲ್ ಜೆ ರಾವ್ ಅವರು ಇದಕ್ಕೆ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ಅವರು, ನನ್ನ ಹೇಳಿಕೆ ಮತ್ತು ಕೆಲಸಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಜೊತೆಗೆ ಇಲ್ಲೇ ಕ್ಷಮೆಯಾಚಿಸುತ್ತಿದ್ದೇನೆ. ಪ್ರಸ್ತುತ ಘಟನೆಗೆ ಸಂಬಂಧಿಸಿ ಇದೊಂದು ಸಂವೇದನೆಯಿಲ್ಲದ ಪೋಸ್ಟ್ ಆಗಿತ್ತು. ಒಬ್ಬ ವೈದ್ಯನಾಗಿ ಎಲ್ಲಾ ಜೀವಗಳೂ ಸಹ ಮುಖ್ಯ. ಕಳೆದ ಹತ್ತು ವರ್ಷಗಳಿಂದ ಈ ದೇಶದಲ್ಲಿ ನೆಲೆಸಿರುವ ನಾನು ಈ ದೇಶದ ಜನ ಮತ್ತು ಧರ್ಮವನ್ನು ತುಂಬು ಹೃದಯದಿಂದ ಗೌರವಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದರು ಎಂದು ವರದಿ ತಿಳಿಸಿದೆ.