ನ್ಯೂಸ್ ನಾಟೌಟ್: ಇಸ್ರೇಲ್ ಹಮಾಸ್ ನಡುವಣ ಯುದ್ಧದಲ್ಲಿ ಇಸ್ರೇಲ್ ಘೋರ ಪ್ರತೀಕಾರಕ್ಕೆ ಮುಂದಾಗಿದ್ದು, ತನ್ನ ಕೆಣಕಿದ ಹಮಾಸ್ ಉಗ್ರರನ್ನು ಹೆಡೆಮುರಿ ಕಟ್ಟಿ ಗಾಜಾ ಪಟ್ಟಿಯನ್ನೇ ಭೂಪಟದಿಂದ ಅಳಿಸಲು ಪಣ ತೊಟ್ಟಿದೆ.
ಇಸ್ರೇಲಿಗರು ಈಗ ಇದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಿದ್ದಾರೆ. ಅಲ್ಲಿನ ಪ್ರತೀ ಮನೆಯಿಂದ ಒಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಈ ನಡುವೆ ಈಗ ಇಸ್ರೇಲ್ ಪ್ರಧಾನಿ ತಮ್ಮ ಮಗನನ್ನೇ ಯುದ್ಧಭೂಮಿಗೆ ಕಳುಹಿಸಿಕೊಡುತ್ತಿದ್ದಾರೆ ಎನ್ನಲಾದ ಫೋಟೋಗಳು ವೈರಲ್ ಆಗುತ್ತಿವೆ. ಆದರೆ ಈ ಫೋಟೋದ ಸತ್ಯಾಸತ್ಯತೆಯನ್ನು ಖಚಿತಪಡಿಸಿದಾಗ ಇದು 2017ರ ಫೋಟೋ ಎಂಬುದು ತಿಳಿದು ಬಂದಿದೆ.
ಇಸ್ರೇಲ್ನಲ್ಲಿ ಪ್ರತಿಯೊಬ್ಬರಿಗೂ ಸೇನಾ ತರಬೇತಿ ಕಡ್ಡಾಯವಾಗಿದ್ದು, 2017ರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಮಗ ಅವ್ನೀರ್ ನೇತನ್ಯಾಹು ಈ ಸೇನಾ ತರಬೇತಿಯನ್ನು ಮುಗಿಸಿದ ವೇಳೆ ತೆಗೆದ ಫೋಟೋ ಇದು ಎಂದು ತಿಳಿದು ಬಂದಿದೆ. ಇಸ್ರೇಲ್ ಡಿಫೆನ್ಸ್ ಸರ್ವೀಸ್ನಲ್ಲಿ 2017ರಲ್ಲಿಯೇ ಅವ್ನೀರ್ ನೇತನ್ಯಾಹು ಸೇನಾ ತರಬೇತಿ ಪೂರ್ಣಗೊಳಿಸಿದ್ದರು.
ತಮ್ಮ ಪುತ್ರ ಈ ಸೇನಾ ತರಬೇತಿ ಪೂರ್ಣಗೊಳಿಸಿದ ಆ ಸಂದರ್ಭದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ (Benjamin Netanyahu), ನಾವು ನಿನ್ನ ಬಗ್ಗೆ ಹೆಮ್ಮೆ ಪಡುತ್ತೇವೆ ಹಾಗೂ ಪ್ರೀತಿಸುತ್ತೇವೆ. ಇದೇ ರೀತಿ ಮಕ್ಕಳನ್ನು ಸೇನಾ ತರಬೇತಿಗೆ ಕಳುಹಿಸಿ ಈ ಅದ್ಭುತ ಅನುಭವವನ್ನು ಅನುಭವಿಸುವ ಎಲ್ಲಾ ಇಸ್ರೇಲಿ ಪೋಷಕರ ಉತ್ಸಾಹವನ್ನು ನಾವು ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದರು.
ಆ ಸಂದರ್ಭದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲ್ ಪ್ರಧಾನಿ ಪುತ್ರನೂ ಯುದ್ಧದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧವಿರುವ ಬೆಂಜಮಿನ್ ತಮ್ಮ ಮಗನನ್ನು ದೇಶಸೇವೆಗೆ ಕಳುಹಿಸಿದ್ದಾರೆ ಎಂದು ಬರೆದು ಈ ಫೋಟೋವೊಂದು ವೈರಲ್ ಆಗುತ್ತಿದೆ.