ನ್ಯೂಸ್ ನಾಟೌಟ್: ಅಹಮದಾಬಾದ್ ನಗರದ ಸುತ್ತ ಈಗ ಕ್ರಿಕೆಟ್ ಜ್ವರ..ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ -ಪಾಕ್ ಮಹಾಮುಖಾಮುಖಿಯ ಕೌತುಕ. ಎರಡೂ ತಂಡಗಳು ಏಳು ವರ್ಷದ ಬಳಿಕ ಮಹತ್ವದ ಕೂಟವೊಂದರಲ್ಲಿ ಎದುರಾಗುತ್ತಿವೆ. ಈ ಹೊತ್ತಿನಲ್ಲಿ ಗೆಲುವು ಯಾರಿಗೆ ಅನ್ನುವ ಕುತೂಹಲ ಒಂದು ಕಡೆಯಾದ್ರೆ ಮತ್ತೊಂದು ಕಡೆ ಬಿಗಿ ಭದ್ರತೆಯದ್ದೇ ಚರ್ಚೆ. ಈ ಒಂದು ಪಂದ್ಯಕ್ಕೆ ಭಾರಿ ಭದ್ರತೆಯನ್ನು ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವರದಿ ಇಲ್ಲಿದೆ ಓದಿ.
ಇದೀಗ ನಿರೀಕ್ಷೆಗಿಂತಲೂ ಹೆಚ್ಚು ಫ್ಯಾನ್ಸ್ ಪಂದ್ಯ ವೀಕ್ಷಿಸಲು ಅಹ್ಮದಾಬಾದ್ ನಗರಕ್ಕೆ ಬಂದಿದ್ದಾರೆ. ಎರಡೂ ತಂಡಗಳು ಆಟಗಾರರು ಸ್ಥಳವನ್ನ ತಲುಪಿದ್ದು ಪಂದ್ಯಕ್ಕೆ ಅಣಿಯಾಗುತ್ತಿದ್ದಾರೆ. ಈಗ ಸುರಕ್ಷಿತವಾಗಿ ಪಂದ್ಯವನ್ನು ಆಯೋಜಿಸುವ ಜವಾಬ್ದಾರಿ ಬಿಸಿಸಿಐ ಹೆಗಲಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಬಿಸಿಸಿಐ, ಗುಜರಾತ್ ಸರ್ಕಾರ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಸಹಾಯಹಸ್ತ ಕೋರಿದೆ. ಸದ್ಯ ಬಿಗಿ ಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಇಲಾಖೆ, ಕೇಂದ್ರ ರಕ್ಷಣಾ ಇಲಾಖೆ ಜಂಟಿಯಾಗಿ ಅಖಾಡಕ್ಕಿಳಿದಿವೆ.
ಇಂಡೋ-ಪಾಕ್ ಪಂದ್ಯಕ್ಕೆ ಹೈ ಸೆಕ್ಯೂರಿಟಿ ಕಲ್ಪಿಸೋ ನಿಟ್ಟಿನಲ್ಲಿ ಗುಜರಾತ್ ಸಿಎಂ ಭೂಪೆಂದ್ರ ಪಟೆಲ್ ಹಾಗೂ ಹೋಮ್ ಮಿನಿಸ್ಟರ್ ಹರ್ಷ್ ಸಂಗ್ವಿ ವಿಶೇಷ ಸಭೆ ನಡೆಸಿದ್ದಾರಂತೆ. ಈ ಸಭೆಯಲ್ಲಿ ಪೊಲೀಸ್ ಇಲಾಖೆ ಉನ್ನತ ಮಟ್ಟ ಅಧಿಕಾರಿಗಳು ಕೂಡ ಭಾಗಿಯಾಗಿದ್ದು, ಪೊಲೀಸ್ ಸಿಬ್ಬಂದಿ ನಿಯೋಜನೆ, ಸೂಕ್ಷ್ಮ ಪ್ರದೇಶ ಮೇಲೆ ಕಣ್ಗಾವಲು ಸೇರಿದಂತೆ ಹಲವು ಚರ್ಚೆ ನಡೆಸಿ ಪ್ರಮಖ ನಿರ್ಧಾರ ಕೈಗೊಂಡಿದ್ದಾರೆ.
ಕ್ರೀಡಾಂಗಣದ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ. 4 ಐಜಿ & ಡಿಜಿಗಳು, 21 ಡಿಸಿಪಿಗಳು, 3 ಆ್ಯಂಟಿ ಡ್ರೋನ್ ಟೀಮ್ ,9 ಬಾಂಬ್ ನಿಷ್ಕ್ರಿಯ ದಳ, 7 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, 4000 ಹೋಮ್ ಗಾರ್ಡ್ ನಿಯೋಜನೆ, ಸಶಸ್ತ್ರ ಮೀಸಲು ಪಡೆಯ 13 ತಂಡ, SDRF ಹಾಗೂ NDRF ಸಿಬ್ಬಂದಿಯನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.