ನ್ಯೂಸ್ ನಾಟೌಟ್ : ಎಣ್ಣೆ ಪಾರ್ಟಿ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಏಳು ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಬುಧವಾರ ಆದೇಶ ಹೊರಡಿಸಿದ ಘಟನೆ ಬೆಳಗಾವಿ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಕಾರು ಚಾಲಕ ಮಂಜುನಾಥ ಪಾಟೀಲ್, ಸಿಬ್ಬಂದಿ ಮಹೇಶ ಹಿರೇಮಠ, ರಮೇಶ ನಾಯಿಕ, ಸತ್ಯಪ್ಪ ತಮ್ಮನ್ನವರ, ಅನಿಲ ತಿಪ್ಪನ್ನವರ, ದೀಪಕ ಗಾವಡೆ, ಯಲ್ಲಪ್ಪ ಮುನ್ನವಳ್ಳಿ ಎಂಬವರನ್ನು ಅಮಾನತು ಮಾಡಲಾಗಿದೆ.
ನಗರದ ಟಿಳಕವಾಡಿಯಲ್ಲಿರುವ ಡಿಹೆಚ್ಒ ಕಚೇರಿ ಹಿಂಭಾಗದಲ್ಲಿರುವ ಕೊಠಡಿಯಲ್ಲಿ ಗಾಂಧಿಜೀ ಫೋಟೋ ಎದುರೇ ಸಿಬ್ಬಂದಿ ಮದ್ಯಪಾನ ಮಾಡಿರುವುದು ವಿಡಿಯೋದಲ್ಲಿ ಸೆರೆಹಿಡಿಯಲಾಗಿತ್ತು.
ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ.ಈ ವಿಡಿಯೋದಲ್ಲಿ ಸಿಬ್ಬಂದಿ ಸಾರಾಯಿ ಕುಡಿಯುತ್ತಿರುವುದು, ಸಿಗರೇಟು ಸೇದುತ್ತಿರುವುದು, ಡ್ಯಾನ್ಸ್ ಹಾಗೂ ಹರಟೆ ಹೊಡೆಯುತ್ತಿರುವುದು ಸೆರೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಡಿಎಚ್ಒ ಡಾ. ಮಹೇಶ ಕೋಣಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 7 ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.