ನ್ಯೂಸ್ ನಾಟೌಟ್: ‘ನೋಡೇ ಬಿಡೋಣ, ನಾನು ಶಾಸಕನಾಗಿರೋದು ನನ್ನ ಜನರ ಸೇವೆಗೆ, ನಾನು ಜನರ ರಕ್ಷಣೆಗೆ ಜೈಲಿಗೆ ಬೇಕಾದರೂ ಹೋಗಲು ಸಿದ್ಧ’ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗುಡುಗಿದ್ದಾರೆ.
ಶಾಸಕ ಹರೀಶ್ ಪೂಂಜಾ ವಿರುದ್ದ ಎಫ್ಐಆರ್ ದಾಖಲು ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಫೇಸ್ ಬುಕ್ ಪೋಸ್ಟ್ ಮೂಲಕ ಪೂಂಜಾ ಪ್ರತಿಕ್ರಿಯಿಸಿದ್ದಾರೆ.
ಬಾಲ್ಯದಿಂದಲೂ ಸುಭಾಷ್ ಚಂದ್ರ ಬೋಸ್ , ಸರ್ದಾರ್ ಪಟೇಲ್, ವೀರ ಸಾವರ್ಕರ್, ಭಗತ್ ಸಿಂಗ್ ಮುಂತಾದವರನ್ನು ಆದರ್ಶವಾಗಿ ಇಟ್ಟುಕೊಂಡಿದ್ದೇನೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ದಿನಗಳಿಂದ ಜನ ಸೇವೆ, ಜನರಿಗಾಗಿ ಸಂಘರ್ಷ ಮಾಡಿಕೊಂಡು ನಾಯಕನಾಗಿ ಬೆಳೆದಿದ್ದೇನೆ, ನಾನು ಜನರಿಂದ ಶಾಸಕನಾಗಿ ಜನರಿಗೋಸ್ಕರ ಇರುವವನು ಅದಕ್ಕಾಗಿ ಯಾವ ಬೆಲೆ ತೆರಲು ಸಿದ್ದ, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಅರಣ್ಯದ ಅಂಚಿನಲ್ಲಿ ನೂರು ವರ್ಷಕ್ಕಿಂತಲೂ ಹಿಂದಿನಿಂದ ಕೃಷಿ ಚಟುವಟಿಕೆ ಮಾಡುತ್ತಾ ಬಂದಿದ್ದ ಕಳೆಂಜದ ದೇವಣ್ಣ ಗೌಡ ಅವರ ಕುಟುಂಬವನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆಯ ವಿರುದ್ಧ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಶಾಸಕ ಮಿತ್ರರೊಂದಿಗೆ ಮತ್ತು ಕಾರ್ಯಕರ್ತ ರೊಂದಿಗೆ ಸೇರಿ ಪ್ರತಿಭಟಿಸಿ ಬಡ ಕುಟುಂಬವನ್ನು ಒಕ್ಕಲೆಬ್ಬಿಸುವುದರಿಂದ ತಡೆದಿದ್ದೆವು, ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮನೆಯವರ ಪರವಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ಧ್ವನಿ ಎತ್ತಿದ್ದು ತಪ್ಪಾಯಿತೇ? ನನ್ನ ಕ್ಷೇತ್ರದ ಜನರ ಪರವಾಗಿ ಹೋರಾಡುವ ಹಕ್ಕು ನನಗಿಲ್ಲವೇ? ನನ್ನ ಜನ ನನ್ನಲ್ಲಿ ಸಮಸ್ಯೆ ಹೇಳಿಕೊಂಡಾಗ ಸುಮ್ಮನಿರಬೇಕೆ? ಹೀಗಾದರೆ ಸಾಮಾನ್ಯ ಜನರ ಗತಿಯೇನು? ಜನರ ಸಮಸ್ಯೆಗೆ ಧ್ವನಿಯಾದ ಒಬ್ಬ ಜನಪ್ರತಿನಿಧಿಯನ್ನು ಹೀಗೆಲ್ಲ ಕಾಡುವುದಾದರೆ ಜನಸಾಮಾನ್ಯರು ಕಾಂಗ್ರೆಸ್ ಸರ್ಕಾರದಡಿಯಲ್ಲಿ ಹೇಗೆ ಬದುಕಬೇಕು? ಎಂದು ಪೂಂಜಾ ಕಿಡಿಕಾರಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ, ಅರಣ್ಯ ಸಚಿವರೇ ನಿಮ್ಮ ಈ ಬೆದರಿಕೆ ತಂತ್ರಗಳಿಗೆ ನಾನು ಬೆದರುವುದಿಲ್ಲ, ಮತ್ತೆ ಹೇಳುತ್ತಿದ್ದೇನೆ ಬಡವರಿಗಾಗಿ ಇಂತಹ ನೂರು ಕೇಸು ಹಾಕಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ, ಜೈಲು ಸೇರಲೂ ತಯಾರಿದ್ದೇನೆ ಎಂದು ಮುಖಪುಟದಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚಿಗೆ ಹರೀಶ್ ಪೂಂಜಾ ಮತ್ತು ಬೆಂಬಲಿಗರ ತಂಡ ಅರಣ್ಯದಲ್ಲಿ ಮನೆಯೊಂದನ್ನು ಕಟ್ಟುತ್ತಿದ್ದ ಕುಟುಂಬದ ಪರ ನಿಂತು ಮಾತನಾಡಿದ್ದರು. ಮನೆಯನ್ನು ಕೆಡವುದಕ್ಕೆ ಮುಂದಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಹರೀಶ್ ಪೂಂಜಾ ನಡುವೆ ಮಾತಿನ ಸಮರವೇ ನಡೆದಿತ್ತು.