ನ್ಯೂಸ್ ನಾಟೌಟ್: ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಗೋಡ್ಸೆ ಚಿತ್ರ ಪ್ರದರ್ಶನ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಇದೀಗ ಪೊಲೀಸ್ ದೂರು ದಾಖಲಾಗಿದ್ದು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಿಗಿ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಅಕ್ಟೋಬರ್ 8ರಂದು ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅದರಂತೆ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ನಿವಾಸಿ ಹನುಮಂತಪ್ಪ ಎಂಬುವರು ದೂರು ನೀಡಿದ್ದು, ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 505/1(C), 505/1(B) ಅಡಿಯಲ್ಲಿ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಂತಿ ಭಂಗ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಫೋಟೋ ಪ್ರದರ್ಶನ ಮಾಡಲಾಗಿದ್ದು, ಗೋಡ್ಸೆ ಚಿತ್ರ ಪ್ರದರ್ಶಿಸಿದವರ ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಒತ್ತಾಯಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಘಟನೆ ನಡೆದಿದ್ದು ಹೇಗೆ..?
ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕರ್ನಾಟಕದಾದ್ಯಂತ ಜನಸಾಗರವೇ ಹರಿದುಬಂದಿತ್ತು. ಶೋಭಾಯಾತ್ರೆಯ ವೇಳೆ ಯುವ ಸಮೂಹ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿತ್ತು. ಆದರೆ, ಮೆರವಣಿಗೆಯಲ್ಲಿ ಕೆಲವರು ವೀರ ಸಾವರ್ಕರ್ ಚಿತ್ರ ಪ್ರದರ್ಶಿಸಿದರೆ, ಮತ್ತೆ ಕೆಲವರು ಜೊತೆಗೆ ಕೋಮು ಘರ್ಷಣೆಯಲ್ಲಿ ಹತ್ಯೆಯಾದ ಶರತ್ ಮಡಿವಾಳ್ ಶಿವಮೊಗ್ಗದ ಮೃತ ಹರ್ಷನ ಭಾವಚಿತ್ರ ಪ್ರದರ್ಶಿಸಿದ್ದರು. ಹಾಗೇ ನಾಥೂರಾಮ್ ಗೋಡ್ಸೆ ಭಾವಚಿತ್ರ ಹಿಡಿದು ಕುಪ್ಪಳಿಸಿದ್ದರು. ಇದೀಗ ಇದು ವಿವಾದಕ್ಕೀಡಾಗಿತ್ತು. ಈ ಬಗ್ಗೆ ಇದೀಗ ದೂರು ದಾಖಲಾಗಿದ್ದು, ಚಿತ್ರ ಪ್ರದರ್ಶಿಸಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.