ನ್ಯೂಸ್ ನಾಟೌಟ್ : ಸಿಲಿಂಡರ್ ಸ್ಫೋಟಗೊಂಡು ದಂಪತಿ ಗಾಯಗೊಂಡಿದ್ದ ಘಟನೆಯೊಂದು ಕೊಡಗಿನ ಕುಶಾಲನಗರದಿಂದ ವರದಿಯಾಗಿತ್ತು. ಈ ದುರಂತದಲ್ಲಿ ಆಶ್ರಮ ಆರಂಭಿಸಿ, 36 ವೃದ್ಧರಿಗೆ ಆಶ್ರಯ ನೀಡಿದ್ದ ಆಶ್ರಯದಾತ ದುರಂತ ಅಂತ್ಯವನ್ನೇ ಕಂಡಿದ್ದರು.ಇದೀಗ ಅವರ ಪತ್ನಿ ಕೂಡ ವಿಧಿವಶರಾದ ನೋವಿನ ವಿಚಾರ ಹೊರಬಿದ್ದಿದೆ.
ಮನೆ-ಮಠವಿಲ್ಲದೇ ತುತ್ತು ಅನ್ನಕ್ಕೂ ಪರದಾಡುತ್ತಿದ್ದ 32 ಹಿರಿ ಜೀವಗಳಿಗೆ ಆಧಾರಸ್ತಂಭವಾಗಿದ್ದ ಈ ದಂಪತಿ ಬಾರದ ಲೋಕಕ್ಕೆ ತೆರಳಿದ್ದು,ವೃದ್ದಾಶ್ರಮವೇ ಅನಾಥವಾಗಿದೆ.ಅವರನ್ನು ತನ್ನ ಕುಟುಂಬ ಸದಸ್ಯರು ಎಂದೇ ಭಾವಿಸಿ ಅವರಿಗಾಗಿಯೇ ಜೀವನ ಮುಡಿಪಾಗಿಟ್ಟ ಈ ದಂಪತಿ ಇಲ್ಲದ ನೋವನ್ನು ಆ ಬಡ ವೃದ್ದರಾದರೂ ಹೇಗೆ ಅರಗಿಸಿಕೊಳ್ಳಲಿ. ಅವರನ್ನೇ ನಂಬಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ 32 ಹಿರಿಯ ಜೀವಗಳು ಇಂದು ನಿಜಕ್ಕೂ ಅನಾಥರಾಗಿದ್ದಾರೆ.
ತೊಂಡೂರಿನಲ್ಲಿರುವ ‘ಜೀವನದಾರಿ’ ಆಶ್ರಮದ ಸ್ಥಾಪಕ ರಮೇಶ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಿಧನರಾಗಿದ್ದರು.ಇದೀಗ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಪತ್ನಿ ರೂಪಾ ಅವರು ಕೂಡ ನಿಧನರಾಗಿದ್ದಾರೆ.ನಮಗೆ ನಿತ್ಯವೂ ಊಟ ಕೊಟ್ಟು ನಮ್ಮ ಹೊಟ್ಟೆಗೆ ಅನ್ನ ನೀಡುತ್ತಿದ್ದ ದೇವರುಗಳು ನಮ್ಮಿಂದ ದೂರ ಹೋದರಲ್ಲ, ಇವರನ್ನು ಇಷ್ಟು ಬೇಗ ಭಗವಂತ ಯಾಕೆ ಕರೆದುಕೊಂಡು ಹೋದ ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುವ ದೃಶ್ಯ ಮನಕಲಕುವಂತಿತ್ತು.
ನಿರ್ಗತಿಕ ವೃದ್ಧರನ್ನು, ಅಂಗವಿಕಲರನ್ನು, ಅಂಧರನ್ನು ಗುರುತಿಸಿ ರಮೇಶ್ ಅವರು ಅವರಿಗಾಗಿಯೇ ಸುಮಾರು 8 ವರ್ಷದ ಹಿಂದೆ ಮಡಿಕೇರಿಯಲ್ಲಿ ಸಣ್ಣದಾಗಿ ಆಶ್ರಮವೊಂದನ್ನು ಆರಂಭಿಸಿದರು. ಬಳಿಕ ಅದರ ಬಗ್ಗೆ ಹಲವು ಕನಸುಗಳನ್ನು ಕಂಡರು.ಹೀಗೆ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ 3 ವರ್ಷಗಳ ಬಾಡಿಗೆ ಮನೆಯಲ್ಲಿ ಆಶ್ರಮ ನಡೆಸಿ ಕೊಂಡು ಮುನ್ನಡೆಸಿದ್ದರು.ಹೀಗೆ ಹೇಗೋ ಹಠ ಸಾಧಿಸುವ ಮೂಲಕ ಅದನ್ನು ಮುಂದುವರಿಸಿಕೊಂಡು ಬಂದಿದ್ದು,ಕಳೆದ ವರ್ಷವಷ್ಟೇ ಏಳನೇ ಹೊಸಕೋಟೆಯ ತೊಂಡೂರು ತೋಟದ ಮಧ್ಯೆಯೂ ಒಂದು ಸಣ್ಣ ಪ್ಲಾಸ್ಟಿಕ್ ಹೊದಿಕೆಯ ಸೂರನ್ನು ನಿರ್ಮಿಸಿ ಅನಾಥರಿಗೆ ನೆರವಾಗಿದ್ದರು.ಇಂತಹ ಮಗನನ್ನು ಕಳೆದು ಕೊಂಡ ನೋವು ಒಂದೆಡೆಯಾದರೆ ತಾಯಿಯಂತೆ ನಮ್ಮನ್ನೆಲ್ಲ ನೋಡಿಕೊಳ್ಳುತ್ತಿದ್ದ ರೂಪಾ ಅವರು ಅಸುನೀಗಿದ್ದು, ಇನ್ನು ನಾವು ಹೇಗಿರಲಿ ಎಂದು ವೃದ್ದರು ಕಣ್ಣೀರಾದರು.
ಅಕ್ಟೋಬರ್ 4 ರ ರಾತ್ರಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಪತಿ-ಪತ್ನಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ರಮೇಶ್ ಸಾವನ್ನಪ್ಪಿದ್ರು. ಇದಾದ ಬಳಿಕ ರಮೇಶ್ ಪತ್ನಿ ರೂಪ ಅವರು ಸೋಮವಾರ ರಾತ್ರಿ ಸುಮಾರು 11:30ರ ಸುಮಾರಿಗೆ ಸಾವನ್ನಪ್ಪಿದ್ದಾರೆ. ಇಬ್ಬರು ಒಟ್ಟಿಗೆ ಆಶ್ರಮ ಕೆಲಸ ಮಾಡಿಕೊಂಡು ಹಿರಿ ಜೀವಿಗಳಿಗೆ ಆಶ್ರಯ ನೀಡಿದ ಪತಿ-ಪತ್ನಿ ಇಬ್ಬರು ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.ಇವರಿಗೆ ಅಮೃತಾ, ಸಿಂಚನಾ, ಐಶ್ವರ್ಯ ಎಂಬ ಮೂವರು ಮಕ್ಕಳಿದ್ದಾರೆ.