ನ್ಯೂಸ್ ನಾಟೌಟ್: ಮಂಗಳೂರು ಮಂಗಳಾದೇವಿ ದೇವಳದ ವ್ಯಾಪಾರ ಧರ್ಮ ದಂಗಲ್ ವಿಚಾರಕ್ಕೆ ಸಂಬಂಧಿಸಿ ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮತ್ತು ಕೆಲವು ಮುಖಂಡರ ವಿರುದ್ಧ ದೂರು ದಾಖಲಾಗಿದೆ.
ಕಳೆದ ಕೆಲವು ದಿನಗಳಿಂದ ಮಂಗಳಾದೇವಿ ದೇವಸ್ಥಾನದಲ್ಲಿ ವ್ಯಾಪಾರ ಧರ್ಮ ದಂಗಲ್ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಅ.16ರಂದು ಮಂಗಳಾದೇವಿಯ ರಥಬೀದಿಯ ಹಿಂದೂಗಳ ಸ್ಟಾಲ್ಗಳಿಗೆ ವಿಎಚ್ಪಿ ಮತ್ತು ಬಜರಂಗದಳದ ಕಾರ್ಯಕರ್ತರೊಡನೆ ಸೇರಿ ಶರಣ್ ಪಂಪ್ವೆಲ್ ಭಗವಾಧ್ವಜ ಕಟ್ಟಿದ್ದರು. ಅಲ್ಲದೇ ಹಿಂದೂಗಳು ಭಗವಾಧ್ವಜ ಇದ್ದ ಸ್ಟಾಲ್ ಗಳಲ್ಲೇ ವ್ಯಾಪಾರ ನಡೆಸಬೇಕು ಎಂದು ಕರೆ ಕೊಟ್ಟಿದ್ದರು. ಇದಕ್ಕೆ ಕೆಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೇ ಬುಧವಾರ ಮಂಗಳೂರಿಗೆ ಆಗಮಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಜಾತ್ರಾ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳು ಹಾಗೂ ಡಿವೈಎಫ್ಐ, ಎಡಪಂಥೀಯ ಸಂಘಟನೆಗಳ ನಿಯೋಗ ಭೇಟಿ ಮಾಡಿ ಶರಣ್ ಪಂಪ್ ವೆಲ್ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಲು ಆಗ್ರಹಿಸಿದ್ದರು.
ಆ ಬಳಿಕ ಸಚಿವರು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಕರೆದು ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸಚಿವರ ಸೂಚನೆ ಬೆನ್ನಲ್ಲೇ ಶರಣ್ ಮತ್ತು ಕೆಲವು ಮುಖಂಡರ ವಿರುದ್ಧ ಐಪಿಸಿ 153A, 34 (ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ ) ಪಾಂಡೇಶ್ವರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.