ನ್ಯೂಸ್ ನಾಟೌಟ್: ಕುಡಿಯಲು ನೀರು ಸಿಗಲಿಲ್ಲ ಎಂಬ ಕಾರಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕದ ನಲ್ಲಿ ಮುರಿದಿದ್ದರಿಂದ ರೊಚ್ಚಿಗೆದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಗ್ರಾಮಸ್ಥರೊಬ್ಬರಿಗೆ ಚಪ್ಪಲಿಯಿಂದ ಹೊಡೆದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಲ್ಲಾ (ಬಿ) ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಿಡಿವೊ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ನೀರಿನ ಘಟಕದಿಂದ ನೀರು ತರಲು ಸಿದ್ದಣ್ಣ ದೊಡ್ಡಮನಿ ಹಾಗೂ ಶಿವಶಂಕರ ತಳವಾರ ಎನ್ನುವವರು ಹೋಗಿದ್ದಾರೆ.
ಕರೆಂಟ್ ಇಲ್ಲ ಎಂದು ಬಿಲ್ ಕಲೆಕ್ಟರ್ ಹೇಳಿದಾಗ, ಇವರ ಮಧ್ಯೆ ಮಾತಿಗೆ ಮಾತು ಬೆಳೆದು, ಪಿಡಿಒ ಜತೆ ಪೋನ್ನಲ್ಲಿ ಮಾತನಾಡುವಂತೆ ಬಿಲ್ ಕಲೆಕ್ಟರ್ ತಿಳಿಸಿದಾಗ ಸಿದ್ದಣ್ಣ ಮಾತನಾಡಿದ್ದಾನೆ. ಆಗ ಪಿಡಿಒ ಮತ್ತು ಸಿದ್ದಣ್ಣ ಒಬ್ಬರಿಗೊಬ್ಬರು ನಿಂದಿಸಿಕೊಂಡಿದ್ದಾರೆ. ಬಳಿಕ ನಿವಾಸಿಗಳು ನಲ್ಲಿ ಮುರಿದು ಹಾಕಿ 3 ದಿನಗಳು ಆಗಿದೆ ಎನ್ನಲಾಗಿದೆ.
ಪಿಡಿಓ ಅವರಿಬ್ಬರನ್ನು ಕರೆಯಿಸಿ ಗ್ರಾಮ ಪಂಚಾಯತ್ ಆವರಣಕ್ಕೆ ಬರುತ್ತಿದ್ದಂತೆ ಚಪ್ಪಲಿಯಿಂದ ಹೊಡೆದು, ಕಪಾಳ ಮೋಕ್ಷ ಮಾಡುತ್ತಾರೆ. ಮತ್ತೊಬ್ಬ ವ್ಯಕ್ತಿಗೆ ಕೈಯನ್ನು ತಿರುವಿ ಕಪಾಳಕ್ಕೆ ಹೊಡೆಯುತ್ತಾರೆ. ಇದನ್ನು ಬಹುತೇಕ ಗ್ರಾಮಸ್ಥರು ನಿಂತು ನೋಡಿದ್ದಾರೆ.
ಇನ್ನು, ಪಿಡಿಒಗೆ ಘಟನೆ ಕುರಿತು ನೋಟಿಸ್ ನೀಡಲಾಗುವುದು. ಪಿಡಿಓ ತಪ್ಪು ಮಾಡಿದ್ದು ಕಂಡು ಬಂದರೆ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ತಾಲೂಕು ಪಂಚಾಯತ್ ಅಧಿಕಾರಿ ಮಾಹಿತಿ ನೀಡಿದ್ದಾರೆ.