ನ್ಯೂಸ್ ನಾಟೌಟ್: ವೃದ್ಧಾಪ್ಯದಲ್ಲಿ ತಂದೆ ನೆರಳಾಗಬೇಕಾಗಿರುವುದು ಮಕ್ಕಳ ಕರ್ತವ್ಯವಾಗಿರುತ್ತದೆ. ಇತ್ತೀಚೆಗೆ ತಮ್ಮ ಮದುವೆ ಮಕ್ಕಳು ಎಂದಾದ ಮೇಲೆ ತಂದೆ ತಾಯಿಯನ್ನು ಕಡೆಗಣಿಸುವುದ ನಡುವೆ, ಇಲ್ಲೊಬ್ಬ ಹೆಣ್ಣು ಮಗಳು ತನ್ನ 62 ವರ್ಷದ ತಂದೆಗೆ ಮದುವೆ ಮಾಡಿಸಿದ ಘಟನೆ ಕೇರಳದಲ್ಲಿ ನಡೆದಿದೆ.
62 ವರ್ಷದ ರಾಧಾಕೃಷ್ಣ ಕುರುಪ್ ಅವರು ತಮ್ಮ ಮಕ್ಕಳ ಸಮ್ಮುಖದಲ್ಲೇ ಕುತ್ತೂರು ಪೋತನ್ಮಲಾ ರಾಂಚು ಭವನದಲ್ಲಿ ವಿವಾಹವಾಗಿದ್ದಾರೆ. ರಾಧಾಕೃಷ್ಣ ಅಡೂರು ಏನಾದಿಮಂಗಲಂ ಮೂಲದ 60 ವರ್ಷದ ಮಲ್ಲಿಕಾ ಕುಮಾರಿ ಎಂಬುವವರನ್ನ ವಿವಾಹವಾಗಿದ್ದಾರೆ. ರಾಧಾಕೃಷ್ಣ ಕುರುಪ್ ಅವರು ತಮ್ಮ ಮಕ್ಕಳು, ಅಳಿಯಂದಿರು ಮತ್ತು ಹತ್ತಿರದ ಬಂಧುಗಳ ಸಂಪೂರ್ಣ ಒಪ್ಪಿಗೆಯೊಂದಿಗೆ ಶುಕ್ರವಾರ ಬೆಳಿಗ್ಗೆ ಸಕಲ ವಿಧಿವಿಧಾನಗಳೊಂದಿಗೆ ಕಾವುಂಭ ತಿರು ಮೊರಂಕಾವ್ ಭಗವತಿ ದೇವಸ್ಥಾನದಲ್ಲಿ ರಾಧಾಕೃಷ್ಣ ಕುರುಪ್ ಮಲ್ಲಿಕಾ ಅವರಿಗೆ ತಾಳಿ ಕಟ್ಟಿದ್ದಾರೆ ಎನ್ನಲಾಗಿದೆ.
ಮೂರು ದಶಕಗಳಿಂದ ರಾಧಾಕೃಷ್ಣ ಕುರುಪ್ ಅವರು ಈರಂಗಾವ್ ದೇವಸ್ಥಾನದ ಬಳಿ ಪಾನಕ, ಸುಗಂಧ ದ್ರವ್ಯ ಮತ್ತು ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಯನ್ನು ನಡೆಸುತ್ತಿದ್ದಾರೆ. ರಾಧಾಕೃಷ್ಣ ಕುರುಪ್ ಅವರ ಪತ್ನಿ ಒಂದೂವರೆ ವರ್ಷದ ಹಿಂದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಐದು ವರ್ಷಗಳ ಹಿಂದೆ ಮಲ್ಲಿಕಾ ಕುಮಾರಿ ಅವರ ಪತಿ ಕೂಡ ಮೃತಪಟ್ಟಿದ್ದರು. ಅವರಿಗೆ ಮಕ್ಕಳಿಲ್ಲ. ಹೀಗಾಗಿ ಮಲ್ಲಿಕಾ ಮನೆಯಲ್ಲಿ ಒಬ್ಬರೇ ವಾಸವಿದ್ದರು.
ರಾಧಾಕೃಷ್ಣನ್ ಕುರುಪ್ ಅವರಿಗೆ ರಶ್ಮಿ ಮತ್ತು ರಂಜು ಎಂಬ ಇಬ್ಬರು ಪುತ್ರಿಯರು ಮತ್ತು ರಂಜಿತ್ ಎಂಬ ಮಗನಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿದ್ದಾರೆ ಮತ್ತು ಕುಟುಂಬವನ್ನು ಹೊಂದಿದ್ದಾರೆ. ಮಗ ರಂಜಿತ್ ಕೊಲ್ಲಂನ ಹಾಸ್ಟೆಲ್ನಲ್ಲಿದ್ದುಕೊಂಡು ಓದುತ್ತಿದ್ದ, ಆದರೆ ಆತ ಹೈಯರ್ ಸ್ಟಡಿಗಾಗಿ ಮನೆ ತೊರೆದ ನಂತರ ಅವರ ಜೀವನವು ಅಸ್ತವ್ಯಸ್ಥಗೊಂಡಿತು. ಪತಿಯೊಂದಿಗೆ ವಿದೇಶದಲ್ಲಿದ್ದ ಕಿರಿಯ ಮಗಳು ರಂಜು ಎರಡು ತಿಂಗಳ ಹಿಂದೆ ತವರಿಗೆ ಮರಳಿದಾಗ, ಕಾಯಿಲೆಯಿಂದ ನರಳುತ್ತಿದ್ದ ತಂದೆಯ ಒಂಟಿ ಬದುಕಿನ ಕಷ್ಟಗಳ ಅರಿವಾಗಿದೆ. ಮಗಳು ರಂಜು ಮುಂದಿನ ವಾರ ವಿದೇಶಕ್ಕೆ ವಾಪಸಾಗಬೇಕಿತ್ತು.
ವಿದೇಶಕ್ಕೆ ಹೋಗುವ ಮೊದಲು ತನ್ನ ತಂದೆಗೆ ವಿವಾಹ ಮಾಡಿಸಬೇಕೆಂದು ನಿರ್ಧರಿಸಿ, ಮ್ಯಾಟ್ರಿಮೋನಿಯಲ್ಲಿ ಬಯೋಡಾಟ ಅಪ್ಲೋಡ್ ಮಾಡಿದ್ದರು. ಅವರಿಗೆ ಪ್ರೇಮಕುಮಾರಿ ಬಯೋಡೆಟಾ ಸಿಕ್ಕಿದ್ದು, ಅವರ ಕುಟುಂಬಸ್ಥರನ್ನು ಒಪ್ಪಿಸಿ, ಹತ್ತಿರದ ಸಂಬಂಧಿಗಳಾದ ಐವತ್ತು ಮಂದಿ ಸಾಕ್ಷಿಯಾಗಿ ರಾಧಾಕೃಷ್ಣ ಕುರುಪ್ ಮತ್ತು ಮಲ್ಲಿಕಾರಿಗೆ ವಿವಾಹ ನೆರೆವೇರಿಸಿದ ಘಟನೆ ನಡೆದಿದೆ.