ನ್ಯೂಸ್ ನಾಟೌಟ್: ನಮಗೆ ಯುದ್ಧ ಮಾಡುವುದಕ್ಕೆ ಇಷ್ಟವಿಲ್ಲ. ನಾವೆಂದೂ ಶಾಂತಿ ಪ್ರಿಯರು. ಮೌನವಾಗಿದ್ದೇವೆಂದರೆ ನಾವು ಶಾಂತಿಯನ್ನು ಬಯಸುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಕಾರ್ಯವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರ್ಥ. ಸರ್ಕಾರಕ್ಕೆ ನಾನೊಂದು ಕೇಳಿ ಕೊಳ್ಳುವುದೇನೆಂದರೆ ನಮ್ಮಂಥಹ ಕ್ಷೇತ್ರಗಳ ರಕ್ಷಣೆಯನ್ನು ನೀವುಗಳು ಮಾಡಬೇಕು. ನಮಗೆ ಯಾರ ಭಯವೂ ಇಲ್ಲ. ನನಗೆ ಇರುವುದು ಅಣ್ಣಪ್ಪ ಸ್ವಾಮಿ ಧರ್ಮ ದೈವಗಳ ಭಯ ಮಾತ್ರ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಧರ್ಮಸ್ಥಳದಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ಪ್ರತಿ ತಿಂಗಳು ಸಂಕ್ರಮಣ ದಿನದಂದು ನಾನು ಬೆಟ್ಟಕ್ಕೆ ಹೋಗುತ್ತೇನೆ. ಅಲ್ಲಿ ಧರ್ಮ ದೇವತೆಗಳ ಮುಂದೆ ನಿಲ್ಲುತ್ತೇನೆ. ಆಗ ನನ್ನೊಂದಿಗೆ ಕೇಳ್ತಾರೆ ಎಲ್ಲ ಸರಿ ನಡೆಯುತ್ತಿದೆಯೇ.. ದಾನ ಧರ್ಮ ಸಕಾಲದಲ್ಲಿ ನಡೆಯುತ್ತಿದೆಯೇ..?, ಉಗ್ರಾಣದಲ್ಲಿ ಅಕ್ಕಿ ಯಾವತ್ತೂ ತುಂಬಿದೆ ಸಂಪತ್ತು ಯಾವಾಗಲೂ ತುಂಬಿದೆ. ನೀವು ದಾನ ಧರ್ಮ ಮಾಡಬೇಕು ಎಂದು ಆದೇಶ ಕೊಡ್ತಾರೆ. ಆಗ ಅವರು ಹೇಳ್ತಾರೆ ನೀವು ತಿಳಿದು ತಪ್ಪು ಮಾಡಿದ್ರೆ ಕೈಯಲ್ಲಿದ್ದ ಎಣ್ಣೆ ಕಣ್ಣಿಗೆ ಹೋದಿತು ಎಂದು. ಅಂದ್ರೆ ಕಡಿಯುವಾಗ ಗೊತ್ತಾಗಲಿಕ್ಕಿಲ್ಲ, ಬೀಳುವಾಗ ಗೊತ್ತಾದೀತು ಎನ್ನುವುದಾಗಿ ಅವರ ಮಾತುಗಳು. ಇಂದು ಎಳ್ಳಿನಷ್ಟು ಕೊಳೆತದ್ದು ನಾಳೆ ಕುಂಬಳಕಾಯಿಯಷ್ಟು ಕೊಳೆತು ಹೋದಿತು ಹೆಗ್ಗಡೆಯವರೇ ಎಂದು ಹೇಳ್ತಾರೆ. ಇದು ಪ್ರತಿ ತಿಂಗಳು ನಾನು ಧರ್ಮ ದೈವಗಳ ಎದುರು ನಿಂತು ಕೇಳುವುದು.
ನನಗೆ ಧರ್ಮ ದೈವಗಳ ಮುಂದೆ ನಿಂತಾಗ ನೈತಿಕ ಬಲ ಬೇಕು. ಇಲ್ಲದಿದ್ದರೆ ಈ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಅದು ಸಾಧ್ಯವೇ ಇಲ್ಲ. ಹಾಗಾಗಿ ನಿಮ್ಮ ಮುಂದೆ ನಿಂತು ಮಾತನಾಡುವಾಗ ನನಗೆ ಮತ್ತು ನಮ್ಮ ಕುಟುಂಬದ ಹೃದಯದಲ್ಲಿ ಯಾವುದೇ ಕಲ್ಮಶವಿಲ್ಲ. ನಾನು ಯಾವುದೇ ಕಾರಣಕ್ಕೂ ತಪ್ಪು ಆಗದಂತೆ ಎಚ್ಚರಿಕೆ ವಹಿಸುತ್ತೇವೆ, ಏಕೆಂದರೆ ಮುಂದಿನ ಸಂಕ್ರಮಣಕ್ಕೆ ನಾನು ಮತ್ತೆ ಧರ್ಮ ದೈವಗಳ ಮುಂದೆ ಹೋಗಿ ನಿಲ್ಲಬೇಕು. ಧರ್ಮದೈವದ ಮುಂದೆ ನಿಂತಾಗ ಹೇಳ್ತಾರೆ ನಿಮ್ಮಿಂದ ತಿಳುವಳಿಕೆ ಇದ್ದು ತಪ್ಪಾಗಿದ್ದರೆ ಕ್ಷಣ ಮಾತ್ರದಲ್ಲಿ ಶಿಕ್ಷೆ ಕೊಡುತ್ತೇವೆ. ಇಲ್ಲದಿದ್ದರೆ ವರ್ಷ ಕಾಯ್ತೇವೆ. ವಾರ, ಹನ್ನೆರಡು ವರ್ಷ ಬೇಕಾದರೂ ಕಾಯ್ತೇವೆ, ಬೆಳಗ್ಗೆ ಬಿತ್ತಿದರಂತೆ ಸಾಯಂಕಾಲ ಕೊಯ್ದರಂತೆ ಅನ್ನುವ ಅಪಕೀರ್ತಿ ಬೇಡ ಅನ್ನುವ ಮಾತನ್ನು ಅವರು ಹೇಳಿದ್ದಾರೆ. ಇದರ ಮಾತಿನ ಅರ್ಥ ವೆನೆಂದರೆ ನಾವು ಸರಿ ಇದ್ದರೆ ಮಾತ್ರ ಸಾಧ್ಯ. ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥನ ಒಪ್ಪಿಸುವ ರೀತಿಯಲ್ಲಿ ನಮಗೆ ಮನುಷ್ಯನನ್ನು ಒಪ್ಪಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ ಅನೇಕ ರೀತಿಯ ಅಪಚಾರದ ಮಾತುಗಳು ಕೇಳಿ ಬರುತ್ತಿವೆ. ನಾನು ಸರ್ಕಾರ, ನ್ಯಾಯಾಲಯಕ್ಕೆ ಕೇಳ್ತೆನೆ, ನೀವು ಏನು ಬೇಕಾದರೂ ತನಿಖೆ ಮಾಡಿ. ಪ್ರಪಂಚದಲ್ಲಿ ನಾವು ಅಜೇಯರಲ್ಲ. ನ್ಯಾಯಕ್ಕಾಗಿ ನಾವು ತಲೆ ತಗ್ಗಿಸುತ್ತೇವೆ. ಕಾನೂನನ್ನು ನಾವು ಮೀರಿ ಹೋಗುವವರಲ್ಲ. ನಮ್ಮ ಮೇಲೆ ಕಾನೂನು ಮೀರಿ ನಡೆಸುತ್ತಿರುವ ಅಪಪ್ರಚಾರ ನಿಲ್ಲಬೇಕು ಎಂದು ತಿಳಿಸಿದರು.