ನ್ಯೂಸ್ ನಾಟೌಟ್ : ಪೊಲೀಸರನ್ನು ಕಂಡ್ರೆನೆ ಕೆಲವರು ಭಯ ಪಡುತ್ತಾರೆ.ಇನ್ನು ಕೆಲವರು ತಪ್ಪು ಮಾಡಿ ಅವರ ಕೈಗೆ ಸಿಕ್ಕಿ ಹಾಕಿಕೊಂಡ್ರೆ ಕಥೆ ಅಷ್ಟೇ.ಅದರ ಮಧ್ಯೆಯೂ ಪೊಲೀಸರ ವಶದಲ್ಲಿದ್ದ ವ್ಯಕ್ತಿಗಳು ಕೆಲವೊಮ್ಮೆ ಎಸ್ಕೇಪ್ ಆಗೋದಿದೆ.ಆದರೆ ಇಲ್ಲೊಬ್ಬ ವ್ಯಕ್ತಿ ಪೊಲೀಸರ ವಾಹನವನ್ನೇ ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಹರ್ಯಾಣದಲ್ಲಿ ಈ ಘಟನೆ ವರದಿಯಾಗಿದೆ. ಹರಿಯಾಣ ಪೊಲೀಸರಿಗೆ ಕೌಟುಂಬಿಕ ಕಲಹದ ಕುರಿತು ದೂರುವೊಂದು ಕೇಳಿ ಬಂದಿದ್ದು, ಈ ಕಾರಣದಿಂದ ಪೊಲೀಸರು ದೂರು ಬಂದ ಸ್ಥಳದತ್ತ ತನ್ನ ತುರ್ತು ಪ್ರತಿಕ್ರಿಯೆ ವಾಹನ(Emergency Response Vehicle) ದಲ್ಲಿ ಹೋಗುತ್ತಿದ್ದರು. ಈ ವೇಳೆ ಯಮುನಾ ನಗರದಲ್ಲಿ, ಗುಂಪೊಂದು ಜಗಳವಾಡುತ್ತಿರುವುದನ್ನು ನೋಡಿ ಪೊಲೀಸರು ವಾಹನವನ್ನು ನಿಲ್ಲಿಸಿದ್ದಾರೆ.ಪೊಲೀಸರು ಜಗಳ ತಡೆಯಲು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವ್ಯಕ್ತಿಯೊಬ್ಬ ವಾಗ್ವಾದಕ್ಕಿಳಿದಿದ್ದಾನೆ. ಪರಿಣಾಮ ಪೊಲೀಸರು ಗುಂಪಿನಲ್ಲಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಡಿದ್ದಾರೆ.
ಬಳಿಕ ಪೊಲೀಸರು ಕೌಟುಂಬಿಕ ಕಲಹದ ದೂರು ಬಂದ ಖುರ್ದಿ ಗ್ರಾಮಕ್ಕೆ ತೆರಳಿದ್ದಾರೆ. ನಂತರ ಪೊಲೀಸರು ವಾಹನದಿಂದ ಕೆಳಗಿಳಿದು ದೂರು ಬಂದ ಮನೆಯತ್ತ ಹೋಗಿದ್ದಾರೆ. ಆದರೆ ಪೊಲೀಸರು ಈ ವೇಳೆ ವಾಹನದ ಕೀಯನ್ನು ಬಿಟ್ಟು ಹೋಗಿದ್ದು,ಪೊಲೀಸರು ಪ್ರಕರಣವನ್ನು ಬಗೆಹರಿಸಲು ಯತ್ನಿಸುತ್ತಿರುವಾಗ ಇತ್ತ ವಾಹನದಲ್ಲಿ ವ್ಯಕ್ತಿ ಪೊಲೀಸ್ ವಾಹನವನ್ನೇ ಬಳಸಿಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ.
ಆದರೆ ಪೊಲೀಸರು ಕೆಲವೇ ನಿಮಿಷದಲ್ಲಿ ಎಚ್ಚರಗೊಂಡು ವಾಹನವನ್ನು ಬೆನ್ನಟ್ಟಿದ್ದಾರೆ. ಸುಮಾರು 10 ಕಿಮೀ. ದೂರದಲ್ಲಿ ಪೊಲೀಸ್ ವಾಹನ ಸಿಕ್ಕಿದೆ. ಅದರಲ್ಲಿ ಕೀ ಇರಲಿಲ್ಲ. ವ್ಯಕ್ತಿ ಕೂಡ ಅಲ್ಲಿಂದ ಪರಾರಿ ಆಗಿದ್ದಾನೆ.ಸದ್ಯ ನಾವು ವ್ಯಕ್ತಿಯ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕನ್ವಾಲ್ಜೀತ್ ಸಿಂಗ್ ಹೇಳಿದ್ದಾರೆ.