ನ್ಯೂಸ್ ನಾಟೌಟ್ : ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿದ್ದ ಕಾರಣಕ್ಕಾಗಿ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ವರ್ತೂರ್ ಅವರನ್ನು ಬಂಧಿಸಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳಿಂದ ಭಾನುವಾರ ತಡರಾತ್ರಿ ಬಂಧನಕ್ಕೊಳಗಾಗಿದ್ದ ವರ್ತೂರು ಸಂತೋಷ್ ಗೆ ಇದೀಗ ಜಾಮೀನು ಮಂಜೂರಾಗಿದೆ. 2ನೇ ಎಸಿಜೆಎಂ ಕೋರ್ಟ್ ನಿಂದ ಜಾಮೀನು ನೀಡಿದ್ದು, ನ್ಯಾಯಾಧೀಶರಾದ ನರೇಂದ್ರ ಅವರಿಂದ ಆದೇಶ ಹೊರಬಿದ್ದಿದೆ. ಸದ್ಯ ವರ್ತೂರ್ ಸಂತೋಷ್ ಅವರಿಗೆ ರಿಲೀಫ್ ಸಿಕ್ಕಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದ ಕೇಸಲ್ಲಿ ಜಾಮೀನು ಸಿಕ್ಕಿದ್ದು ವರ್ತೂರ್ ಸಂತೋಷ್ ಪರ ವಕೀಲ ನಟರಾಜ್ ಅರಣ್ಯ ಅಧಿಕಾರಿಗಳ ಪ್ರಕ್ರಿಯಾ ವೈಫಲ್ಯದ ಬಗ್ಗೆ ವಾದ ಮಂಡನೆ ಮಾಡಿದ್ದರು. ಸದ್ಯ ಪರಪ್ಪನ ಅಗ್ರಹಾರದಲ್ಲಿ ವರ್ತೂರು ಸಂತೋಷ್ ಇದ್ದುಇಂದು ಸಂಜೆ ವೇಳೆಗೆ ವರ್ತೂರ್ ಸಂತೋಷ್ ಬಿಡುಗಡೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ತಮ್ಮ ಚಿನ್ನದ ಚೈನ್ನಲ್ಲಿ ಹುಲಿ ಉಗುರಿನ ಪೆಂಡೆಂಟ್ನ್ನು ಧರಿಸಿ ಬಿಗ್ಬಾಸ್ ಮನೆ ಪ್ರವೇಶಿಸಿದ್ದರು. ಅ.8ರಂದು ಪ್ರಸಾರವಾದ ಬಿಗ್ಬಾಸ್ನ ಆರಂಭದ ಎಪಿಸೋಡ್ನಲ್ಲಿ ಅದು ಬಿತ್ತರವಾಗಿತ್ತು. ಅದನ್ನು ಗಮನಿಸಿದ ಖಾಸಗಿ ವ್ಯಕ್ತಿಯೊಬ್ಬರು ವರ್ತೂರು ಸಂತೋಷ್ ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿರುವ ಕುರಿತು ಮಾಹಿತಿ ನೀಡಿದ್ದರು. ಅದರಂತೆ ವರ್ತೂರು ಸಂತೋಷ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9ರ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಟೋಬರ್ 22ರ ಭಾನುವಾರ ಬಂಧಿಸಿದ್ದರು.
ಸೋಮವಾರ ನ್ಯಾಯಾಲಯ ರಜೆಯಿದ್ದ ಕಾರಣ ರಾಮೋಹಳ್ಳಿ 2ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಅವರ ನಿವಾಸದಲ್ಲಿ ವರ್ತೂರು ಸಂತೋಷ್ರನ್ನು ಹಾಜರುಪಡಿಸಿದ್ದಾರೆ. ಅವರ ಮೇಲಿನ ಆರೋಪಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನಾಧರಿಸಿ ನ್ಯಾಯಾಧೀಶರು ವರ್ತೂರು ಸಂತೋಷ್ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಿ, ಅದರಂತೆ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಸಂತೋಷ್ ಬಂಧನದ ಬಳಿಕ ಅರಣ್ಯಾಧಿಕಾರಿಗಳು, ಸೆಲೆಬ್ರಿಟಿಗಳು ಕೂಡ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು ಬೆಳಕಿಗೆ ಬಂದಿತ್ತು. ವರ್ತೂರು ಸಂತೋಷ್ ಬಂಧನಕ್ಕೆ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಅರಣ್ಯಾಧಿಕಾರಿಗಳ ಮೇಲೆ ಅನುಮಾನ ಕೂಡ ವ್ಯಕ್ತವಾಗಿತ್ತು. ನೊಟೀಸ್ ನೀಡದೆ ಸಂತೋಷ್ ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿ ಹಬ್ಬಿತ್ತು.