ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ನಾವು ದೇವರ ಬಳಿ ಹರಕೆ ಹೇಳಿ ಕೊಂಡಾಗ ಅದನ್ನು ತೀರಿಸುವುದಕ್ಕಾಗಿ ಪೂಜೆ ಅಥವಾ ಏನಾದರೂ ದೇವಸ್ಥಾನಕ್ಕೆ ಸಂಬಂಧಿಸಿ ವಿಶೇಷ ವಸ್ತುವನ್ನು ನೀಡುತ್ತೇವೆ.ಆದರೆ ಇಲ್ಲೊಂದು ಕಡೆ ವಿಚಿತ್ರವಾದ ಹರಕೆ ಸಲ್ಲಿಸುವ ಮೂಲಕ ವಿಶೇಷ ಪದ್ಧತಿಯನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಚೇಳು, ಹಾವು, ಝರಿಗಳ ಪ್ರತಿಕೃತಿಯನ್ನು ಕೊಟ್ಟು ಹರಕೆ ತೀರಿಸಲಾಗುತ್ತದೆ. ಇದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಹಿನ್ನೀರಿನ ಬಳಿ ವಿಶೇಷ ದೇವಸ್ಥಾನವೊಂದು ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.ಇಲ್ಲಿ ಇರುವ ಕಾಡುಗೊಲ್ಲರ ಆರಾಧ್ಯ ದೈವ ಐತಿಹಾಸಿಕ ಶ್ರೀ ರಂಗನಾಥ ಸ್ವಾಮಿಯ ಅಂಬಿನೋತ್ಸವ ಪ್ರತಿ ವರ್ಷವೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರುತ್ತದೆ. ಈ ಬಾರಿಯೂ ಈ ದೇವಸ್ಥಾನದಲ್ಲಿ ಅ. 25ರ ಬುಧವಾರ 12ಗಂಟೆಯ ವೇಳೆಗೆ ವಿಜೃಂಭಣೆಯಿಂದ ನೆರವೇರಿತು.
ಜಿಲ್ಲೆಯ ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದ ದೇವರ ಉತ್ಸವ ಮೂರ್ತಿಗೆ ಮೊದಲು ವಾಣಿ ವಿಲಾಸ ಜಲಾಶಯದ ಹಿನ್ನೀರಿನಲ್ಲಿ ಗಂಗಾ ಪೂಜೆ ನೆರವರಿಸಲಾಯಿತು.ಬಳಿಕ ಅಂಚಿಬಾರಿಹಟ್ಟಿಯಿಂದ ಉತ್ಸವ ಮೂರ್ತಿಯನ್ನು ಬಣ್ಣದ ಪಟ್ಟದ ಕುದುರೆ ಹಾಗೂ ಪಲ್ಲಕ್ಕಿ ಮೇಲೆ ಕೂರಿಸಿ ಭಕ್ತಿ ಭಾವದಿಂದ ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಹಾರನಕಣಿವೆ ಶ್ರೀರಂಗನಾಥ ಶಿಲಾಮೂರ್ತಿ ಇರುವ ಜಾಗಕ್ಕೆ ಕರೆತಂದು ಸಂಪ್ರದಾಯದಂತೆ ಪೂಜಾರಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ತದನಂತರ ಬನ್ನಿ ಮರದ ಹತ್ತಿರ ಬಾಳೆ ಕಂದು ನೆಟ್ಟು, ಪೂಜೆ ಸಲ್ಲಿಸಲಾಗುತ್ತದೆ. ಬಾಳೆ ಮರದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಬಾಳೆ ಕಂದಿಗೆ ಬಿಲ್ಲು ಬಾಣ ಹೊಡೆಯುವ ಮೂಲಕ ಅಂಬಿನೋತ್ಸವ ನೆರವೇರಿಸುವ ಪದ್ಧತಿ ಇಲ್ಲಿಯದ್ದು.
ಈ ಜಾತ್ರೆಯ ವಿಶೇಷತೆಯೆಂದರೆ ಹಾವು, ಚೇಳು, ಹಲ್ಲಿ, ಝರಿಯ ಪ್ರತಿಕೃತಿಗಳನ್ನು ನೀಡಿ ಹರಕೆ ತೀರಿಸಲಾಗುತ್ತದೆ. ಇದು ಏಕೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದಾದರೆ ಯಾರಿಗಾದರೂ ಹಾವು, ಚೇಳು, ಜರಿ, ಹಲ್ಲಿ, ಇರುವೆ, ತಿಗಣೆ ಇತರೆ ವಿಷ ಜಂತುಗಳು ಕಡಿದಾಗ ಅಥವಾ ಕಣ್ಣಿಗೆ ಕಂಡಾಗ ಮೊದಲು ನೆನಪಿಸಿಕೊಳ್ಳುವುದೇ ಹಾರನಕಣಿವೆ ಶ್ರೀರಂಗನಾಥನನ್ನು. ಹೀಗಾಗಿ ಮನೆಗಳಲ್ಲಿ, ಹೊಲ- ಗದ್ದೆಗಳಲ್ಲಿ ಹಾವು, ಚೇಳು ಕಡಿದಾಗ ಅಥವಾ ಕಾಣಿಸಿಕೊಂಡಾಗ, ‘ಅಂಬಿನೋತ್ಸವದ ಜಾತ್ರೆಗೆ ಬಂದು ಹಾವು, ಚೇಳು, ಜರಿ ಕೊಟ್ಟು ಹರಕೆ ತೀರಿಸುತ್ತೇನೆ’ ಎಂದು ಜನರು ದೇವರಿಗೆ ಹರಕೆ ಮಾಡಿಕೊಳ್ಳುವ ಪದ್ಧತಿ ಭಕ್ತ ಸಮೂಹದಲ್ಲಿದೆ.