ನ್ಯೂಸ್ ನಾಟೌಟ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಭಯಾನಕ ಯುದ್ಧ ಮುಂದುವರದಿದ್ದು, ಇದರ ನಡುವೆ ಜಗತ್ತಿನ ಇತರ ಕೆಲ ದೇಶಗಳಲ್ಲೂ ಈ ಸಂಬಂಧ ಹಿಂಸಾಚಾರಗಳು ನಡೆಯುತ್ತಿವೆ.
ಇನ್ನೊಂದು ಕಡೆ ಚೀನಾದಲ್ಲಿ ಭೀಕರ ಘಟನೆ ನಡೆದಿದ್ದು, ಚೀನಾ ರಾಜಧಾನಿ ಬೀಜಿಂಗ್ನ ಹೃದಯ ಭಾಗದಲ್ಲಿ ಇಸ್ರೇಲ್ ರಾಯಭಾರ ಕಚೇರಿ ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡಿ ಚೂರಿ ಇರಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು ತನ್ನ ನೆಲದ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ರು ಅಂತಾ ರೊಚ್ಚಿಗೆದ್ದಿರುವ ಇಸ್ರೇಲ್ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. ಗಾಜಾಪಟ್ಟಿ ಹಾಗೂ ಹಮಾಸ್ ಉಗ್ರರ ನೆಲೆಗಳನ್ನ ನಾಶ ಮಾಡುತ್ತಿದೆ. ಆದರೆ ಇದೇ ಸಮಯದಲ್ಲಿ ಚೀನಾ ರಾಜಧಾನಿ ಬೀಜಿಂಗ್ನ ಇಸ್ರೇಲ್ ರಾಯಭಾರ ಕಚೇರಿ ಅಧಿಕಾರಿಗಳ ಮೇಲೆ ಇಂದು ಹಲ್ಲೆ ನಡೆದಿದೆ ಎಂದು ಆರೋಪ ಕೇಳಿಬಂದಿದೆ.
ಈಗ ಇಸ್ರೇಲ್ ಅಧಿಕಾರಿಗಳ ಮೇಲೆ ದಾಳಿ ನಡೆದಿರುವುದು ರಾಯಭಾರ ಕಚೇರಿ ಆವರಣದಲ್ಲಲ್ಲ. ಇಂಥ ದಾಳಿ ರಾಯಭಾರ ಕಚೇರಿ ಆವರಣದಲ್ಲಿ ಸಂಭವಿಸುವ ಸಾಧ್ಯತೆ ಕೂಡ ಇಲ್ಲ, ಏಕೆಂದರೆ ರಾಯಭಾರ ಕಚೇರಿಗೆ ಬಿಗಿ ಬಂದೋಬಸ್ತ್ ಇರುತ್ತದೆ. ಆದ್ರೆ ಹೊರಗೆ ಅಟ್ಯಾಕ್ ನಡೆದಿದೆ ಅಂತಾ ಆರೋಪಿಸಲಾಗಿದೆ. ಹಲ್ಲೆಯ ನಂತರ ರಾಯಭಾರ ಕಚೇರಿಯ ಅಧಿಕಾರಿ ಒಬ್ಬರು ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಧಿಕಾರಿ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಲಾಗಿದೆ. ಆದರೆ ಚೀನಾ ಈ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಈ ಬೆಳವಣಿಗೆ ನಡುವೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಇದೀಗ 7ನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಜನ 2 ಕಡೆ ಮೃತಪಟ್ಟಿದ್ದು, ಗಾಜಾಪಟ್ಟಿಯು ಸಂಪೂರ್ಣ ನಾಶವಾಗುತ್ತಿದೆ.