ನ್ಯೂಸ್ ನಾಟೌಟ್ : ಉಡುಪಿಯ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಡೀಲ್ ಮಾಡಿ ಹಿಂದು ಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹವರ್ತಿಗಳು ಪೊಲೀಸ್ ಬಲೆಗೆ ಬಿದ್ದಿರುವುದು ದೊಡ್ಡ ಸುದ್ದಿಯಾಗಿತ್ತು. ಆ ಬಳಿಕ ಅಂಥಹದ್ದೇ ರೀತಿಯ ಮತ್ತೊಂದು ಬಿಜೆಪಿ ಟಿಕೆಟ್ ಡೀಲ್ ಪ್ರಕರಣ ಬೆಳಕಿಗೆ ಬಂದಿತ್ತು.
ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಟಿಕೆಟ್ (BJP Ticket) ಕೊಡಿಸುವುದಾಗಿ ನಿವೃತ್ತ ಎಂಜಿನಿಯರ್ ಒಬ್ಬರಿಗೆ ಕೋಟಿ ಕೋಟಿ ಹಣ ವಂಚಿಸಿದ ಆರೋಪದ (Fraud Case) ಮೇಲೆ ಬಿಜೆಪಿಯ ಮಾಜಿ ಮುಖಂಡ ಹಾಗೂ ಹಾಲಿ ಕೆಆರ್ಪಿಪಿ ಪಕ್ಷದ ನಾಯಕ ರೇವಣ ಸಿದ್ದಪ್ಪನನ್ನು ಕೊಟ್ಟೂರು ಪೊಲೀಸರು (Police) ಬಂಧಿಸಿದ್ದಾರೆ.
ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆರೋಪಿ ರೇವಣ ಸಿದ್ದಪ್ಪ, ಪುತ್ತೂರು ಮೂಲದ ಶೇಖರ್ ಜೊತೆ ಸೇರಿ ಕೊಟ್ಟೂರಿನ ನಿವೃತ್ತ ಎಂಜಿನಿಯರ್ ಶಿವಮೂರ್ತಿ ಅವರಿಗೆ 1.95 ಕೋಟಿ ರೂ. ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಬೇರೆಯವರಿಗೆ ಟಿಕೆಟ್ ಘೋಷಣೆಯಾದ ಬಳಿಕ ವಿಚಾರ ತಿಳಿದ ಶಿವಮೂರ್ತಿ ಪ್ರಶ್ನಿಸಿದಾಗ ಬೆದರಿಕೆಯನ್ನು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಇದಾದ ಬಳಿಕ ಊರಿನ ಮುಖಂಡರು ರಾಜಿ ಕೂಡ ಮಾಡಿಸಿದ್ದರು. ಈ ವೇಳೆ ಆರೋಪಿ ಹಣ ವಾಪಸ್ ನೀಡುವುದಾಗಿ ಎರಡು ಚೆಕ್ಗಳನ್ನು ನೀಡಿದ್ದ. ಈ ಚೆಕ್ಗಳು ಬೌನ್ಸ್ ಆಗಿದ್ದವು. ಬಳಿಕ ಈ ಬಗ್ಗೆ ಶಿವಮೂರ್ತಿಯವರು ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಾದ ದಿನದಿಂದ ಪ್ರಕರಣದ ಪ್ರಮುಖ ಆರೋಪಿ ರೇವಣ ಸಿದ್ದಪ್ಪ ತಲೆ ಮರೆಸಿಕೊಂಡಿದ್ದ. ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಇದೀಗ ಬಂಧಿಸಿದ್ದಾರೆ. ಆರೋಪಿಯ ಬಂಧನವನ್ನು ವಿಜಯನಗರ (Vijayanagar) ಎಸ್ಪಿ ಶ್ರೀಹರಿಬಾಬು ಅವರು ಖಚಿತಪಡಿಸಿದ್ದಾರೆ.