ನ್ಯೂಸ್ ನಾಟೌಟ್: ಉಡುಪಿಯ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಡೀಲ್ ಮಾಡಿ ಹಿಂದು ಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹವರ್ತಿಗಳು ಪೊಲೀಸ್ ಬಲೆಗೆ ಬಿದ್ದಿರುವುದು ದೊಡ್ಡ ಸುದ್ದಿಯಾಗಿತ್ತು. ಇದೀಗ ಅಂಥಹದ್ದೇ ರೀತಿಯ ಮತ್ತೊಂದು ಬಿಜೆಪಿ ಟಿಕೆಟ್ ಡೀಲ್ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರದ ಟಿಕೆಟ್ ಕೊಡಿಸುತ್ತೇವೆಂದು ಬಿಜೆಪಿ ಮುಖಂಡರು ಡೀಲ್ ಮಾಡಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ನಿವೃತ್ತ ಪಿಡಬ್ಲ್ಯುಡಿ ಇಂಜಿನಿಯರ್ ಶಿವಮೂರ್ತಿ ಎಂಬವರಿಂದ ಕೋಟಿ ಕೋಟಿ ಹಣ ಪಡೆದಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಈ ಕುರಿತು ವಿಜಯನಗರ ಉಪವಿಭಾಗದ ಕೊತ್ತೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಪ್ತರೆಂದು ಹೇಳಿಕೊಂಡು ಬಿಜೆಪಿ ಮುಖಂಡರು ಎನಿಸಿಕೊಂಡವರೇ ಎರಡೂವರೆ ಕೋಟಿ ಹಣ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಹಣ ಕಳಕೊಂಡ ಶಿವಮೂರ್ತಿ ಮುಖ್ಯಮಂತ್ರಿಗೆ ಬರೆದಿರುವ ಪತ್ರ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಟ್ಟೂರು ತಾಲೂಕಿನ ರೇವಣಸಿದ್ದಪ್ಪ ಮತ್ತು ಪುತ್ತೂರು ಮೂಲದ ಶೇಖರ್ ಎನ್.ಪಿ. ಎಂಬವರು ವಂಚನೆ ಎಸಗಿರುವ ಬಗ್ಗೆ ಪತ್ರದಲ್ಲಿ ಶಿವಮೂರ್ತಿ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆತ್ಮೀಯರು ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದ ಶೇಖರ್ ಅಲಿಯಾಸ್ ರಾಜಶೇಖರ ಕೋಟ್ಯಾನ್ ಮತ್ತು ರೇವಣಸಿದ್ದಪ್ಪ ಅಲಿಯಾಸ್ ಸಿದ್ದಲಿಂಗಪ್ಪ ಬೆಂಗಳೂರಿನ ಕಚೇರಿ ಒಂದರಲ್ಲಿ ನಳಿನ್ ಕುಮಾರ್ ಅವರನ್ನು ತನಗೆ ಭೇಟಿ ಮಾಡಿಸಿದ್ದರು. ಆನಂತರ, ನಳಿನ್ ಕುಮಾರ್ ಜೊತೆಗೆ ಟಿಕೆಟ್ ಕುರಿತಾಗಿ ಮಾತುಕತೆ ನಡೆಸಿದ್ದು ಎಲ್ಲ ವ್ಯವಹಾರವನ್ನು ಶೇಖರ್ ನೋಡಿಕೊಳ್ಳುತ್ತಾರೆ ಎಂದಿದ್ದರು ಎಂಬುದಾಗಿ ಪತ್ರದಲ್ಲಿ ಶಿವಮೂರ್ತಿ ಬರೆದಿದ್ದಾರೆ.
ಪುತ್ತೂರು ಮೂಲದ ಶೇಖರ್ ಅವರಿಗೆ ಬೆಂಗಳೂರಿನ ಬನಶಂಕರಿಯ ಬರೋಡಾ ಬ್ಯಾಂಕ್ ಶಾಖೆ ಮತ್ತು ನಗದು ರೂಪದಲ್ಲಿ ವಿವಿಧ ಸಂದರ್ಭಗಳಲ್ಲಿ ಒಟ್ಟು ಒಂದು ಕೋಟಿ 55 ಲಕ್ಷ ರೂಪಾಯಿ ಹಣ ನೀಡಿದ್ದಾಗಿ ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೆ, ರೇವಣಸಿದ್ದಪ್ಪ ಅವರು ಟಿಕೆಟ್ ದೊರಕಿಸಲು ಬಿಜೆಪಿ ಹಿರಿಯ ಮುಖಂಡರಿಗೆ ಹಣ ನೀಡಲಿಕ್ಕಿದೆ ಎಂದು ಕೂಡ್ಲಿಗಿ ತಾಲೂಕಿನ ಆರೆಸ್ಸೆಸ್ ಮುಖಂಡ ನಾಗಣ್ಣ ಸಮ್ಮುಖದಲ್ಲಿ 50 ಲಕ್ಷ ಪಡೆದಿದ್ದಾರೆ.
ಒಟ್ಟು ಎರಡು ಕೋಟಿ 55 ಲಕ್ಷ ರೂಪಾಯಿ ಹಣವನ್ನು 2022ರ ಅಕ್ಟೋಬರ್ ನಿಂದ 2023ರ ಎಪ್ರಿಲ್ ತಿಂಗಳ ವರೆಗಿನ ಅವಧಿಯಲ್ಲಿ ನೀಡಿದ್ದೇನೆ. ಜಮೀನು, ನಿವೇಶನ ಮಾರಿ ಹಣವನ್ನು ನೀಡಿದ್ದೇನೆ. ತನ್ನ ನಿಯತ್ತಿನ ಹಣವನ್ನು ಮರಳಿಸಿ ನ್ಯಾಯ ತೆಗೆಸಿಕೊಡಬೇಕೆಂದು ಶಿವಮೂರ್ತಿ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಹಣ ನೀಡಿರುವುದಕ್ಕೆ ದಿನ, ಖಾತೆ ಸಂಖ್ಯೆ, ದಾಖಲೆಗಳನ್ನೂ ಪತ್ರದಲ್ಲಿ ತೋರಿಸಿದ್ದಾರೆ.
ಪುತ್ತೂರು ಮೂಲದ ಶೇಖರ್ ಅಲಿಯಾಸ್ ರಾಜಶೇಖರ ಕೋಟ್ಯಾನ್ ನೇರಳಕಟ್ಟೆ ನಿವಾಸಿ ಎನ್ನಲಾಗುತ್ತಿದ್ದು, ಚುನಾವಣೆಗೂ ಹಿಂದೆ ನಳಿನ್ ಕುಮಾರ್ ಜೊತೆಗೆ ಗುರುತಿಸಿಕೊಂಡು ಟಿಕೆಟ್ ಡೀಲ್ ನಡೆಸಿರುವ ಬಗ್ಗೆ ಪತ್ರದಲ್ಲಿ ಹೇಳಲಾಗಿದೆ. ಚುನಾವಣೆ ಸಂದರ್ಭದಲ್ಲಿ ತಾನು ಹೇಳಿದವರಿಗೆ ಟಿಕೆಟ್ ಸಿಗದ್ದರಿಂದ ನಳಿನ್ ಕುಮಾರ್ ಮೇಲಿನ ಸಿಟ್ಟಿನಲ್ಲೋ ಏನೋ, ಪುತ್ತೂರಿನಲ್ಲಿ ಅರುಣ್ ಪುತ್ತಿಲ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ, ವಂಚನೆ ಪ್ರಕರಣದಲ್ಲಿ ರಾಜಶೇಖರ ಕೋಟ್ಯಾನ್ ಹೆಸರು ಕೇಳಿಬರುತ್ತಿದ್ದಂತೆ ಪುತ್ತಿಲ ಪರಿವಾರದಿಂದ ಪ್ರಕಟಣೆ ನೀಡಲಾಗಿದ್ದು, ಆ ವ್ಯಕ್ತಿಗೂ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧ ಇಲ್ಲ. ಚುನಾವಣೆ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಅರುಣ್ ಪುತ್ತಿಲರಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.
ಇದೀಗ ವಿಜಯನಗರ ಉಪವಿಭಾಗದ ಕೊತ್ತೂರು ಪೋಲೀಸ್ ಠಾಣೆಯಲ್ಲಿ IPC 1860 ( U/s, 420, 506, 34 ) ಅಡಿ 19/10/2023 ರಂದು ಪ್ರಕರಣ ದಾಖಲಾಗಿದೆ. ಇಂದು ಅಂದರೆ 21 /10/2023 ರಂದು ವಂಚನೆಗೊಳಗಾದ ಶಿವಮೂರ್ತಿಯವರು ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ. ಇದನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ಸಿ.ಬಿ. ತನಿಖೆ ನಡೆಸಿ, ತಪ್ಪತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.