ನ್ಯೂಸ್ ನಾಟೌಟ್: ಕಾವೇರಿ (Cauvery) ನೀರಿನ ವಿಚಾರದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರದ ಧೋರಣೆಯಿಂದ ಹಾಗೂ ಕೋರ್ಟ್ನ ಆದೇಶದಿಂದ ರೈತರು ಪಲ್ಟಿ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಇಂದು (ಅ.27) ಮಂಡ್ಯದಲ್ಲಿ (Mandya) ಬಿಜೆಪಿ (BJP) ಕಾರ್ಯಕರ್ತರು ಪಲ್ಟಿ ಚಳವಳಿ ನಡೆಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು 53ನೇ ದಿನದ ಕಾವೇರಿ ಹೋರಾಟದ ಪ್ರಯುಕ್ತ ಪಲ್ಟಿ ಚಳವಳಿ ಮಾಡುವ ಮೂಲಕ ಸರ್ಕಾರವನ್ನು ಗಮನ ಸೆಳೆಯಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಸದ್ಯ ಕೆಆರ್ಎಸ್ ಅಣೆಕಟ್ಟಿನಲ್ಲಿ 100 ಅಡಿಗಿಂತ ಕಡಿಮೆ ನೀರು ಇದೆ.
ಹೀಗಿದ್ದರೂ ಸಹ ತಮಿಳುನಾಡಿಗೆ ನೀರು ಬಿಡಲು ಸರ್ಕಾರ ಸಮ್ಮತಿ ನೀಡುತ್ತಿದೆ. ಇತ್ತ ಕೋರ್ಟ್ ತಮಿಳುನಾಡಿಗೆ ನೀರು ಬಿಡಿ ಎಂದು ಮಂಡ್ಯ ರೈತರನ್ನು ಪಲ್ಟಿ ಹೊಡೆಸುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಕೋರ್ಟ್ ತೀರ್ಪುಗಳನ್ನು ಖಂಡಿಸಿ ವಿಡಂಬನೆ ಮಾಡಲು ಬಿಜೆಪಿ ಕಾರ್ಯಕರ್ತರು ಪಲ್ಟಿ ಹೊಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ನೀರು ನಿಲ್ಲಿಸಲು ಮನವಿ ಪತ್ರ ನೀಡಿದರು.