ನ್ಯೂಸ್ ನಾಟೌಟ್: ಚಿನ್ನಾರಿಮುತ್ತ ನಟ ವಿಜಯ ರಾಘವೇಂದ್ರ ಬಹು ದಿನಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಆಗಮಿಸಿದ್ದಾರೆ. ಪತ್ನಿ ಸ್ಪಂದನ ಅಕಾಲಿಕ ಮರಣಕ್ಕೆ ಈಡಾದ ಬಳಿಕ ವಿಜಯ ರಾಘವೇಂದ್ರ ಒಂದಷ್ಟು ದಿನ ಏಕಾಂಗಿಯಾಗಿದ್ದರು. ಇದೀಗ ಮರಳಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ ೧೩ರಂದು ಸ್ಪಂದನರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮವನ್ನು ಬೆಳ್ತಂಗಡಿಯ ಮುಗ್ಗ ಗುತ್ತುವಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ರಾಘವೇಂದ್ರ ಮತ್ತು ಕುಟುಂಬಸ್ಥರು ಆಗಮಿಸಿದ್ದರು. ಇದೇ ವೇಳೆ ವಿಜಯ್ ರಾಘವೇಂದ್ರ ಅವರ ತಂದೆ ಸಿಎಸ್ ಎ ಚಿನ್ನೇ ಗೌಡ, ಬಾವ ರಕ್ಷಿತ್ ಶಿವರಾಂ , ಮಾವ ಬಿ.ಕೆ.ಶಿವರಾಂ ಮತ್ತಿತರರು ಹಾಜರಿದ್ದರು.
ಏನಿದು ಆತ್ಮ ಸೇರಿಸುವುದು..?
ಸಾಮಾನ್ಯವಾಗಿ ತುಳುನಾಡಿನ ಜನರ ಸಂಸ್ಕೃತಿಯ ಪ್ರಕಾರ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೊಡುವ ಕಾರ್ಯ ಮುಖ್ಯವಾಗಿರುತ್ತದೆ. ಅವರ ಆತ್ಮ ಒಂದು ಕಡೆ ಇದ್ದು ಅದನ್ನು ಶಾಸ್ತ್ರೋತ್ತರ ಕಾರ್ಯಕ್ರಮದ ಮೂಲಕ ಮನೆಯ ಹಿರಿಯರ ಆತ್ಮಗಳ ಜೊತೆ ಸೇರಿಸುವ ಪ್ರಕ್ರಿಯೆ ಇರುತ್ತದೆ. ಅದನ್ನೇ ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮಾಡಲಾಗಿದೆ.