ನ್ಯೂಸ್ ನಾಟೌಟ್: ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಅಕ್ಟೋಬರ್ 14ರಂದು ಅಹಮದಾಬಾದ್ನಲ್ಲಿ ಸೆಣಸಾಟ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 14,000 ಟಿಕೆಟ್ ಗಳನ್ನು ಬಿಡುಗಡೆ ಮಾಡಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದೇ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಟಿಕೆಟ್ ಬೇಡಿಕೆ ಹೆಚ್ಚಾಗಿದೆ.
ಇಂದಿನಿಂದ (ಭಾನುವಾರ) ಪಂದ್ಯದ ಟಿಕೆಟ್ ಮಾರಾಟ ಆರಂಭವಾಗಲಿದ್ದು, ಅಭಿಮಾನಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಟಿಕೆಟ್ ಗಳನ್ನು ಖರೀದಿಸಬಹುದು ಎಂದು ಬಿಸಿಸಿಐ ತಿಳಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1,30,000ಕ್ಕೂ ಹೆಚ್ಚು ಅಸನಗಳ ವ್ಯವಸ್ಥೆ ಇದೆ. ಇಲ್ಲಿ ಕಳೆದ ಗುರುವಾರ (ಅ.5ರಂದು) ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ವಿಶ್ವಕಪ್ ಉದ್ಘಾಟನಾ ಪಂದ್ಯ ನಡೆದಿತ್ತು. ಈ ಪಂದ್ಯವನ್ನು 47 ಸಾವಿರ ಜನ ವೀಕ್ಷಿಸಿದ್ದರು.
ಆತಿಥೇಯ ಭಾರತವು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿದರೆ, ಶುಕ್ರವಾರ ಹೈದರಾಬಾದ್ನಲ್ಲಿ ಪಾಕಿಸ್ತಾನವು ನೆದರ್ಲೆಂಡ್ಸ್ ವಿರುದ್ಧ ಜಯ ದಾಖಲಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದೆ.