ನ್ಯೂಸ್ ನಾಟೌಟ್: ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 25 ಮತ್ತು 26ರಂದು ಆಯೋಜಿಸಿದ ಬೆಂಗಳೂರು ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ದ.ಕ. ಜಿಲ್ಲೆಯಿಂದಲೇ ಟ್ಯಾಂಕರ್ಗಳ ಮೂಲಕ ಕುಡಿಯಲು ನೀರು ಪೂರೈಕೆಗೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಾಸಕ, ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅಶೋಕ್ ರೈ, ಕೋಣಗಳ ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರ ವಹಿಸಿ ಈ ನಿರ್ಧಾರ ಕೈಕೊಳ್ಳಲಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ರಾಜ್ಯ, ದೇಶದೆದೆಲ್ಲೆಡೆ ಪಸರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗಿದೆ. ಇದರಿಂದ ಹೊಸ ದಾಖಲೆ ಸೃಷ್ಟಿಯಾಗಲಿದೆ. ಎರಡು ದಿನದ ಕಾರ್ಯಕ್ರಮದಲ್ಲಿ ಎಂಟು ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ. ಈಗಾಗಲೇ ಕಂಬಳವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, 155 ಮೀ.ಉದ್ದ ಕಂಬಳದ ಕರೆ ನಿರ್ಮಾಣ ಮಾಡಲಾಗಿದೆ ಪೂರ್ವ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ ಎಂದರು.
ಬೆಂಗಳೂರಿಗೆ ತೆರಳುವ ಕೋಣಗಳಿಗೆ ಉಪ್ಪಿನಂಗಡಿಯಲ್ಲಿ ಏಕಕಾಲಕ್ಕೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಅಲ್ಲಿಂದ ಹೊರಟ ಕೋಣಗಳು ಹಾಸನದಲ್ಲಿ ಸುಮಾರು 4 ಗಂಟೆಗಳ ಕಾಲ ವಿಶ್ರಾಂತಿ ಪಡೆಯಲಿವೆ. ದಾರಿಯುದ್ದಕ್ಕೂ ಸ್ಥಳೀಯ ಹಾಗೂ ತುಳು ಸಂಘಟನೆಗಳಿಂದ ಕೋಣಗಳನ್ನು ಸ್ವಾಗತಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
116 ಜೋಡಿ ಕೋಣಗಳ ನೋಂದಣಿಯಾಗಿದ್ದು, ಇನ್ನು ಕೆಲವು ಕೋಣಗಳ ಯಜಮಾನರು ಭಾಗವಹಿಸಲು ಆಸಕ್ತಿ ವಹಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ವಿಭಾಗಗಳಲ್ಲಿ ಜಯಗಳಿಸುವ ಕಂಬಳದ ಕೋಣಗಳಿಗೆ, ಓಡಿಸುವವರಿಗೆ ಬಹುಮಾನ ಮೊತ್ತ, ಭಾಗವಹಿಸುವ ಪ್ರತಿ ಕೋಣಗಳ ಯಜಮಾನರಿಗೆ ಗೌರವ ಧನ ನೀಡಲಾಗುವುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಬೆಂಗಳೂರಿನ ಕಂಬಳದ ವೈಭವವನ್ನು ಇನ್ನಷ್ಟು ಹೆಚ್ಚಿಸಲು ಸಿನಿಮಾ ತಾರೆಯರಾದ ಐಶ್ವರ್ಯ ರೈ , ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ, ಸುನಿಲ್ ಶೆಟ್ಟಿ, ಯಶ್, ದರ್ಶನ್ , ಕ್ರಿಕೆಟ್ ತಾರೆ ಕೆ.ಎಲ್. ರಾಹುಲ್ ಸಹಿತ ಹಲವು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ನಟ ರಜನೀಕಾಂತ್ ಕೂಡಾ ಭಾಗವಹಿಸಲು ಆಸಕ್ತಿ ವಹಿಸಿದ್ದಾರೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಕಂಬಳದ ಜತೆಗೆ ತುಳುನಾಡಿನ ಸಾಂಪ್ರದಾಯಿಕ ಅಡುಗೆ, ತಿಂಡಿತಿನಿಸುಗಳು ಸೇರಿದಂತೆ ಇಲ್ಲಿನ ವೈಶಿಷ್ಟೃಕ್ಕೆ ಸಂಬಂಧಿಸಿದ 250 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ದಾಯ್ಜಿವರ್ಲ್ಜ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ , ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ನ ರಾಮಕೃಷ್ಣ ಆರ್., ಕಾರ್ಯಕ್ರಮ ಸಂಯೋಜಕ ವಿಜಯ ಕೋಟ್ಯಾನ್, ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಹರೀಶ್ ಮೋಟುಕಾನ ಮತ್ತಿತರರು ಉಪಸ್ಥಿತರಿದ್ದರು.