ನ್ಯೂಸ್ ನಾಟೌಟ್: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮೃತಪಟ್ಟಿರುವ ಕಾರ್ಮಿಕರೆಲ್ಲರೂ ಪದವೀಧರರು. ಕೂಲಿ ಕೆಲಸಕ್ಕಾಗಿ ಪಟಾಕಿ ಅಂಗಡಿಗೆ ಬಂದಿದ್ದರು. ದುರಂತದಲ್ಲಿ ಸಂಪೂರ್ಣ ಸುಟ್ಟು ಸಜೀವ ದಹನವಾಗಿದ್ದಾರೆ. ಪಟಾಕಿ ದುರಂತದಲ್ಲಿ ಮೃತಪಟ್ಟಿರುವ ಏಳು ಮಂದಿ ಗುರುತು ಪತ್ತೆಯಾಗಿದೆ. ಎಲ್ಲರೂ ತಮಿಳುನಾಡಿನವರು. ಆಕ್ಸಫರ್ಡ್ ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಧರ್ಮಪುರಿ ಜಿಲ್ಲೆಯ ವೆಡಪ್ಪನ್, ರಾಘವನ್, ಆದಿಕೇಶವನ್, ಗಿರಿ, ಮುನಿವೇಲಂ, ಆಕಾಶ್, ಇಳಂಬರ್ದಿ, ಚಂಗಂ ತಾಲ್ಲೂಕಿನ ಪ್ರಕಾಶ ರಾಜ್.
ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮೃತಪಟ್ಟಿರುವ ಕಾರ್ಮಿಕರ ಮೃತದೇಹ ತೋರಿಸಲು ಆಸ್ಪತ್ರೆಯವರು ಹಾಗೂ ಪೊಲೀಸರು ಹಿಂದೇಟು ಹಾಕುತ್ತಿದ್ದು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಶನಿವಾರ ಮಧ್ಯಾಹ್ನ ದುರಂತ ನಡೆದಿದೆ. ಭಾನುವಾರ ಬೆಳಗ್ಗೆಯಾದರೂ ಮೃತದೇಹ ತೋರಿಸಿಲ್ಲ. ತಂದೆ-ತಾಯಿಗಾದರೂ ಒಳಗೆ ಬಿಡಬೇಕು’ ಎಂದು ಸಂಬಂಧಿಕರು ಕೇಳುತ್ತಿದ್ದಾರೆ. ‘ಆಸ್ಪತ್ರೆ ಬಳಿ ಹೋದರೆ ಪೊಲೀಸರು ಲಾಠಿಯಿಂದ ಹೊಡೆಯುತ್ತಿದ್ದಾರೆ. ಇದು ವ್ಯವಸ್ಥೆನಾ. ನಮ್ಮ ನೋವಿಗೆ ಸ್ಪಂದನೆ ಇಲ್ಲವೇ? ನಮ್ಮ ಮಕ್ಕಳನ್ನು ನಮಗೆ ತೋರಿಸಿ’ ಎಂದು ಸಂಬಂಧಿಕರು ಗೋಗರೆಯುತ್ತಿದ್ದಾರೆ.