ನ್ಯೂಸ್ ನಾಟೌಟ್: ಇತ್ತೀಚೆಗೆ ರಾಜ್ಯದಲ್ಲಿ ಈಗ ಹುಲಿ ಉಗುರಿನ ಪೆಂಡೆಂಟ್ನದ್ದೇ ಭಾರಿ ಸುದ್ದಿಯಾಗುತ್ತದೆ. ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬಳಿಕ ಇದು ಚಿತ್ರರಂಗದಲ್ಲೂ ಭಾರಿ ಆತಂಕಕ್ಕೆ ಕಾರಣವಾಗಿದ್ದು, ಹಲವು ಸೆಲಬ್ರಿಟಿಗಳು ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕೊಡಗಿನಲ್ಲಿ ಹಲವರ ಮನೆಗಳಲ್ಲಿ ಪೂರ್ವಜರ ಕಾಲದಿಂದಲೂ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳಿವೆ. ಅದು ಅಪರಾಧ ಅಲ್ಲ. ಜನರು ಅನಗತ್ಯವಾಗಿ ಆತಂಕಪಡಬಾರದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಹುಲಿ ಉಗುರಿನ ಪದಕವನ್ನು ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ವಿರುದ್ಧ ಅರಣ್ಯ ಇಲಾಖೆಯ ಮುಂದಿನ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ವಿಧಿಸಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಅರಣ್ಯಾಧಿಕಾರಿಗಳು ಈ ಬಗೆಯ ಕ್ರಮ ಕೈಗೊಳ್ಳಬಾರದು ಎನ್ನಲಾಗಿದೆ.
ಈ ಕುರಿತು ಅರಣ್ಯ ಖಾತೆ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡಬೇಕು. ಈ ಸಂಬಂಧ ಈಗಾಗಲೇ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮಾತನಾಡಿರುವೆ. ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೂ ಮಾತನಾಡುತ್ತೇನೆ ಎಂದು ಶಾಸಕ ಪೊನ್ನಣ್ಣ ತಿಳಿಸಿದ್ದಾರೆ.
ವನ್ಯಜೀವಿಗಳ ಪ್ರಾಣ ತೆಗೆದು ಅದರ ವಸ್ತುಗಳ ಮಾರಾಟ ತಡೆಯಲೆಂದು ಮಾತ್ರವೇ ಕಾನೂನು ರಚನೆಯಾಗಿದೆ. ಇದರ ಉದ್ದೇಶ ಅರಿಯದೇ ಪೂರ್ವಜರಿಂದ ಬಂದ, ಪರಂಪರೆಯಿಂದ ಬಂದ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವುದು ಎಷ್ಟರಮಟ್ಟಿಗೆ ಸರಿ ಎಂದೂ ಪ್ರಶ್ನಿಸಿದರು.
ಅರಣ್ಯಾಧಿಕಾರಿಗಳು ಮೊದಲು ಕಾನೂನನ್ನು ಸ್ಪಷ್ಟವಾಗಿ ಓದಿ ತಿಳಿದುಕೊಳ್ಳಬೇಕು. ನಂತರ ಕ್ರಮ ಜರುಗಿಸಬೇಕು. ಸದ್ಯ ಈಗಾಗಲೇ ಪ್ರಕರಣ ಹೈಕೋರ್ಟ್ ನಲ್ಲಿ ಇದೆ. ಅಲ್ಲಿ ಅಂತಿಮ ತೀರ್ಪು ಬರುವವರೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬಾರದು ಎಂದರು.